ಚಿಕ್ಕಲ್ಲೂರು ಜಾತ್ರೆಗೆ ಪ್ರತ್ಯೇಕ ಬಸ್

16 HANUR 2
ಹನೂರಿನಿಂದ ಚಿಕ್ಕಲ್ಲೂರು ಜಾತ್ರೆಗೆ ಒದಗಿಸಲಾಗಿದ್ದ ಬಸ್‌ನಲ್ಲಿ ತೆರಳಿದ ಭಕ್ತರು.
Published on

ಹನೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಅಂತು ಇಂತೂ ಗುರುವಾರ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಲಾಯಿತು. ಇದರಿಂದ ಭಕ್ತರು ಸಂತಸ ವ್ಯಕ್ತಪಡಿಸಿದರು.

ಈ ಜಾತ್ರೆಗೆ ಪ್ರತಿ ವರ್ಷವೂ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಕೊಳ್ಳೇಗಾಲದಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಆದರೆ ತಾಲೂಕು ಕೇಂದ್ರವಾಗಿರುವ ಹನೂರಿನಿಂದ ಚಿಕ್ಕಲ್ಲೂರಿಗೆ ಬಸ್ ಸೌಕರ್ಯವನ್ನು ಕಲ್ಪಿಸುತ್ತಿರಲಿಲ್ಲ. ಈ ಜಾತ್ರೆಗೆ ಹನೂರು ಸೇರಿದಂತೆ ಒಡೆಯರಪಾಳ್ಯ, ಮಾರ್ಟಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ, ಕೌದಳ್ಳಿ, ರಾಮಾಪುರ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ದಂಟಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಹೆಚ್ಚಿನ ಭಕ್ತರು ತೆರಳುತ್ತಾರೆ. ಅದರಲ್ಲೂ ಪಂಕ್ತಿಸೇವೆಯ ದಿನ ಈ ಭಾಗದಿಂದ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಆದರೆ ಹನೂರಿನಿಂದ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಬಹುತೇಕ ಭಕ್ತರು ದೊಡ್ಡಿಂದುವಾಡಿ ಮಾರ್ಗವಾಗಿ ಸುತ್ತಿ ಬಳಸಿ ಚಿಕ್ಕಲ್ಲೂರಿಗೆ ತೆರಳಿದರೆ, ಇನ್ನು ಕೆಲ ಭಕ್ತರು ಬಂಡಳ್ಳಿ ಮಾರ್ಗವಾಗಿ ಆಟೋ ಹಾಗೂ ಗೂಡ್ಸ್ ವಾಹನಗಳ ಮೂಲಕ ತೆರಳಬೇಕಿಈಉ. ಬಸ್ ಸೌಕರ್ಯವನ್ನು ಒದಗಿಸುವಂತೆ ಸಾರಿಗೆ ಅಧಿಕಾರಿಗಳಲ್ಲಿ ಪ್ರತಿ ವರ್ಷ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಬಗ್ಗೆ ಜ.14 ರ ವಿಜಯವಾಣಿ ಪತ್ರಿಕೆಯಲ್ಲಿ ‘ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಹನೂರಿನಿಂದ ಚಿಕ್ಕಲ್ಲೂರು ಜಾತ್ರೆಗೆ 9 ವಿಶೇಷ ಬಸ್ ಸೌಲಭ್ಯ ಕಲ್ಪಿಸಿದ್ದು, 3 ಬಸ್‌ಗಳು ನಿರಂತರವಾಗಿ ಸಂಚರಿಸಲಿವೆ. ಇದರಿಂದ ಭಕ್ತರು ನಿಟ್ಟುಸಿರು ಬಿಡುವಂತಾಗಿದೆ. ಜತೆಗೆ ಮಹಿಳೆಯರು ಫುಲ್ ಖುಷ್ ಆದರು. ಸಾರಿಗೆ ಅಧಿಕಾರಿಗಳ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಯಿತು. ಹಾಗೆಯೇ ಪ್ರತಿ ವರ್ಷವೂ ಇದೇ ರೀತಿ ಸೌಕರ್ಯ ಒದಗಿಸಲಿ ಎಂಬ ಒತ್ತಾಯವೂ ಕೇಳಿ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net