ಯಕ್ಷಗಾನ ಲೋಕದ ಗಾನ ಮಾಂತ್ರಿಕ, ಕರಾವಳಿ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Subrahmanya Dhareshwara
Published on

ಬೆಂಗಳೂರು: ಯಕ್ಷಗಾನ ಲೋಕದ ಗಾನ ಮಾಂತ್ರಿಕ, ಕರಾವಳಿ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು (ಏಪ್ರಿಲ್​ 25) ಬೆಳಗ್ಗೆ ಇಹಲೋಕ ತ್ಯಜಿಸಿದರು.

ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ ಕೊನೆಯುಸಿರೆಳೆದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇಂದು ಸಂಜೆ ಉಡುಪಿಯ ಕುಂದಾಪುರ ತಾಲೂಕಿನ ನಾಗೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಧಾರೇಶ್ವರ ಅವರು ತಮ್ಮ ಜೀವನವನ್ನು ಯಕ್ಷಗಾನಕ್ಕೆ ಮುಡುಪಾಗಿಟ್ಟಿದ್ದರು. ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ. ಯಕ್ಷಗಾನ ಕ್ಷೇತ್ರದಲ್ಲಿ 47 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಕೋಟ ‘ಅಮೃತೇಶ್ವರಿ ಮೇಳ’ ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದರು. 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್​ಗಳಿಗೆ ಧಾರೇಶ್ವರ ಅವರು ಧ್ವನಿಯಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ, ಕರಾವಳಿ ರತ್ನ, ಕನ್ನಡ ಕುಲಭೂಷಣ, ಶ್ರೀ ಗುರು ನರಸಿಂಹ, ಶ್ರೀರಾಮ ವಿಠಲ, ನಾರ್ಣಪ್ಪ ಉಪ್ಪರು, ಕಾಳಿಂಗ ನಾವುಡ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net