ಜಯಣ್ಣ ದೆಹಲಿ ವಿಶೇಷ ಪ್ರತಿನಿಧಿ

TBJ_Delhi
Published on

ತುಮಕೂರು: ನಿರೀಕ್ಷೆಯಂತೆ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿದೆ. ಆ ಮೂಲಕ ಜಿಲ್ಲೆಯ ಕಾಂಗ್ರೆಸ್‌ನ ‘ತ್ರಿಮೂರ್ತಿ’ಗಳಿಗೆ ಸಚಿವ ಸ್ಥಾನಮಾನ ಕಲ್ಪಿಸಿದಂತಾಗಿದೆ.

ಏಳನೇ ಬಾರಿ ಶಾಸಕರಾಗಿರುವ ಟಿ.ಬಿ.ಜಯಚಂದ್ರ (ಜಯಣ್ಣ) ಅವರನ್ನು ತತ್‌ಕ್ಷಣದಿಂದ ಜಾರಿ ಬರುವಂತೆ ದೆಹಲಿಯ ರಾಜ್ಯ ವಿಶೇಷ ಪ್ರತಿನಿಧಿ ನೇಮಿಸಿದ್ದು ಸಚಿವ ಸಂಪುಟ ಸ್ಥಾನಮಾನದೊಂದಿಗೆ ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಜಿ.ಪರಮೇಶ್ವರಗೆ ಗೃಹ ಸಚಿವ ಸ್ಥಾನ ಜತೆಗೆ ಜಿಲ್ಲಾ ಉಸ್ತುವರಿ ಸಚಿವ ಸ್ಥಾನ ನೀಡಲಾಗಿದೆ. ಕೆ.ಎನ್.ರಾಜಣ್ಣಗೆ ಸಹಕಾರ ಸಚಿವ ಸ್ಥಾನ ಜತೆಗೆ ಹಾಸನದ ಉಸ್ತುವಾರಿ ವಹಿಸಲಾಗಿದೆ.

ಮಂತ್ರಿಮಂಡಲದಲ್ಲಿ ಸ್ಥಾನ ಸಿಗದೆ ನಿರಾಸೆಗೊಳಗಾಗಿದ್ದ ಜಯಣ್ಣ ವಿಧಾನಸಭಾಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದರಲ್ಲದೆ, ಮಂತ್ರಿ ಸ್ಥಾನ ತಪ್ಪಿಸಿದವರ ವಿರುದ್ಧ ಒಳಗೊಳಗೆ ಕೊತಕೊತ ಕುದಿಯುತ್ತಿದ್ದರು. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕುಂಚಿಟಿಗ ಸಮುದಾಯದ ಹಿರಿಯ ನಾಯಕನನ್ನು ಓಲೈಸಿರುವ ಕಾಂಗ್ರೆಸ್ ಈಗ ಸಚಿವ ಸ್ಥಾನಮಾನವಿರುವ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಿದೆ.

ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕಾರಣಾಂತರದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಟಿಬಿಜೆ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಮತ್ತೊಮ್ಮೆ ಅದೇ ಹುದ್ದೆ ಒಲಿದು ಬಂದಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲು ತಮ್ಮ ಅನುಭವವನ್ನು ಜಯಚಂದ್ರ ಧಾರೆ ಎರೆಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net