

ಮಾಗಡಿ : ತುಮಕೂರು ಜಿಲ್ಲೆಗೆ ನೀಡಬೇಕಾದ ಹೇಮಾವತಿ ನೀರನ್ನು ನೀಡಿದರೆ, ನಿಮಗೆ ನಾವೇಕೆ ವಿರೋಧ ಮಾಡಬೇಕು ಎಂದು ಪಟ್ಟನಾಯಕನಹಳ್ಳಿ ಸ್ಪಟಕಪುರಿ ಮಹಾಸಂಸ್ಥಾನ ಮಠದ ಶ್ರೀನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಹೂಜೇನಹಳ್ಳಿಯಲ್ಲಿ ಮಾತನಾಡಿ, ಯಾವ ಜಿಲ್ಲೆ, ತಾಲೂಕುಗಳಿಗೆ ಹೇಮಾವತಿ ನೀರನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ಧರಿಸಿ ಯೋಜನೆ ಪ್ರಾರಂಭಿಸಲಾಗಿದೆ. ಅದರಂತೆ ತುಮಕೂರು ಜಿಲ್ಲೆಗೆ ನೀಡಬೇಕಾದ ನೀರಿನ ಪಾಲು ನೀಡಿ ನಂತರ ಮಾಗಡಿಯ ಪಾಲಿನ ನೀರು ನೀಡುತ್ತಾರೆ. ಇದಕ್ಕೆ ವಿರೋಧ ಎದುರಾಗುವುದಿಲ್ಲ. ನೀರು ಬಂದೆ ಬರುತ್ತದೆ. ಇದರಿಂದ ಇಲ್ಲಿನ 87 ಕೆರೆಗಳು ತುಂಬಲಿವೆ. ರಾಮನಗರ, ಚನ್ನಪಟ್ಟಣ, ಕನಕಪುರ ಭಾಗಕ್ಕೆ ಸತ್ತೆಗಾಲದಿಂದ ಶಿಂಷಾ ಯೋಜನೆ ಮೂಲಕ ನೀರು ಹರಿಯಲಿದೆ. ಈ ಮೂಲಕ 5 ವರ್ಷದಲ್ಲಿ ಈ ಭಾಗ ನೀರಾವರಿ ಪ್ರದೇಶವಾಗಲಿದೆ ಎಂದರು.
ರೈತ ಉಳಿದರೆ ದೇಶ ಅಭಿವೃದ್ದಿಯಾಗುತ್ತದೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಅವರಿಗೆ ಮೂಲ ಸೌಲಭ್ಯ ಒದಗಿಸಬೇಕು. ಆಗ ವ್ಯವಸಾಯದಲ್ಲಿ ಶ್ರದ್ದೆಯಿಂದ ತೊಡಗಿಸಿಕೊಳ್ಳುತ್ತಾರೆ. ಬೆಳೆಗೆ ಸರ್ಕಾರ ವೈಜ್ಞಾನಿಕವಾದ ಬೆಂಬಲ ಬೆಲೆ ನೀಡಬೇಕು. ಆಗ ರೈತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಗೆ ಅರ್ಥಬರುತ್ತದೆ ಎಂದರು.
ಒಂದು ಲೀಟರ್ ನೀರಿನ ಬೆಲೆ 20 ರೂ., ಆದರೆ, ಹಾಲಿಗೆ 31 ರೂ. ನೀಡಲಾಗುತ್ತಿದೆ. ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ದುಪ್ಪಟ್ಟು ಹಣಬೇಕಿದೆ. ಆದರೆ, ನೀರಿಗಿರುವ ಬೆಲೆ ಹಾಲಿಗೆ ಇಲ್ಲದಂತಾಗಿದೆ ಎಂದು ಪಟ್ಟನಾಯಕನಹಳ್ಳಿ ಸ್ಪಟಕಪುರಿ ಮಹಾಸಂಸ್ಥಾನ ಮಠದ ಶ್ರೀನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಸಿಲ್ಕ್ ಆ್ಯಂಡ್ ಮಿಲ್ಕ್ ಉತ್ಪಾದನೆಗೆ ಒತ್ತು ನೀಡಬೇಕು. ನಂದಿನಿ ಉತ್ಪನ್ನ ದೇಶ, ವಿದೇಶದಲ್ಲಿ ಮಾರುಕಟ್ಟೆಗೆ ವ್ಯಾಪಿಸಿದೆ. ಇದಕ್ಕೆ ರೈತರೆ ಬೆನ್ನೆಲುಬು. ರೈತರು ಕಟ್ಟಿರುವ ಹಾಲು ಉತ್ಪಾದಕ ಸಂಸ್ಥೆ ಇಂದು ನೂರಾರು ಕೋಟಿ ರೂ. ಲಾಭದಲ್ಲಿ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹಾಲು ಉತ್ಪಾದನೆಯಾಗಲು ಸಹಕಾರಿ ತತ್ವ, ರೈತರ ಆಸಕ್ತಿ ಮುಖ್ಯವಾಗಿದೆ. ಅವರಿಗೆ ಮತ್ತಷ್ಟು ಆಸಕ್ತಿ ಬರಲು ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರವನ್ನು ಸರ್ಕಾರ 31 ರಿಂದ 50 ರೂ.ಗೆ ಶೀಘ್ರವೇ ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರನ್ನು ಉಳಿಸಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದರು.
ರೇಷ್ಮೆ ಬೆಳೆಗೆ ಕೇಂದ್ರ, ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಕೇಂದ್ರ ಸರ್ಕಾರ ರೇಷ್ಮೆಯನ್ನು ಚೀನಾ ಮತ್ತಿತರ ದೇಶಗಳಿದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಾರಣ ದರ ಇಳಿಕೆಯಾಗುತ್ತಿದ್ದು, ಈ ಆಮದು ನೀತಿಯನ್ನು ರದ್ದುಗೊಳಿಸಿದ್ದಾರೆ. ನಮ್ಮಲ್ಲೆ ಸಾಕಷ್ಟು ಅವಕಾಶ ಇರುವುದರಿಂದ ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯನ್ನು ಇಲ್ಲಿಯೆ ಬಳಕೆ ಮಾಡಿಕೊಂಡರೆ ರೇಷ್ಮೆ ಬೆಳೆಗಾರರಿಗೆ ಸಹಕಾರಿಯಾಗುತ್ತದೆ. ಇದರಿಂದ ರೇಷ್ಮೆ ಮತ್ತು ಹಾಲಿಗೆ ರಾಷ್ಟ್ರದಲ್ಲೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದರು.
ಹೂಜೇನಹಳ್ಳಿ ಹಾಲುಉತ್ಪಾದಕ ಸಂಘದ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಉಮೇಶ್, ನಿರ್ದೇಶಕರಾದ ಮೋಹನ್ ಕುಮಾರ್, ಚಿಕ್ಕಣ್ಣ, ನರಸಿಂಹಮೂರ್ತಿ, ಚಿಕ್ಕರಂಗಯ್ಯ, ಕೋಮಲ, ಪುಟ್ಟತಾಯಮ್ಮ, ಧನಂಜಯ, ಕಾರ್ಯದರ್ಶಿ ಚಿಕ್ಕನರಸೇಗೌಡ, ಗ್ರಾಪಂ ಸದಸ್ಯ ಗೀತಾ ಶಂಕರ್, ಧನಂಜಯ, ಮಾಜಿ ಸದಸ್ಯ ಗೋವಿಂದರಾಜು, ಆಂಜನಪ್ಪ, ಶಿವರಾಮಯ್ಯ ಇತರರು ಇದ್ದರು.