

ಹಾಸ್ಯ ಎಂಬುದು ಒಂದು ಸುಂದರವಾದ ಭಾವನೆ. ಅದು ನಮ್ಮಲ್ಲಿ ಮತ್ತು ಬೇರೆಯವರಲ್ಲಿ ಖುಷಿಯನ್ನು ಮೂಡಿಸಬಹುದು. ಆದರೆ ಕಾಮಿಡಿ ಹೋಗಿ ಸಿಡಿಮಿಡಿ ಆಗಬಾರದು. ಅಂದರೆ ಮಾಡುವ ಜೋಕ್ ನಗಿಸಬೇಕೇ ಹೊರತು ನೋವಿಗೆ ಕಾರಣವಾಗಬಾರದು. ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದರಿಂದ ನಮಗೇ ತೊಂದರೆ ಆಗಬಹುದು. ಅದರಿಂದಾಗುವ ಅಪಾಯದ ಕುರಿತು ಉತ್ತರಿಸುವ ಉದ್ದೇಶವೇ ಈ ಲೇಖನ.
| ಎನ್. ಗುರುನಾಗನಂದನ
ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಕ್ಕೇನೂ ಕೊರತೆ ಇಲ್ಲ. ಮೀಮ್ಸ್-ರೀಲ್ಸ್ನಿಂದ ಮನರಂಜನೆ ಸಿಗುತ್ತದೆ. ಸಾವಿರಾರು ಟ್ರೋಲ್ ಪೇಜ್ಗಳಿವೆ. ಸುತ್ತಮುತ್ತ ನಡೆಯುವ ಘಟನೆಗಳನ್ನು ಆಧರಿಸಿ ಹೊಗಳಿಕೆ ಮತ್ತು ತೆಗಳಿಕೆ ಬರುತ್ತವೆ. ಇದರ ಜತೆ ನಮ್ಮ ಬಗ್ಗೆಯೇ ನೆಗೆಟಿವ್ ಇರುವ ಪೋಸ್ಟ್ ಗಳು ಕೂಡ ಇವೆ. ‘ನಮಗ್ಯಾರ್ ಬೀಳ್ತಾರೆ?, ‘ಬಡವರ ಮಕ್ಕಳು ಬಿಡಪ್ಪ’, ‘ನಾನು ಪ್ರಯೋಜನಕ್ಕೆ ಬಾರದ ವೈಟ್ ಕ್ರೇಯಾನ್ ಪೆನ್ಸಿಲ್ ಇದ್ದಂತೆ’ ಇಂತಹ ನೂರಾರು ಸೆಲ್ಪ್ ಟ್ರೋಲ್ಗಳು ನಡೆಯುತ್ತಲೇ ಇರುತ್ತವೆ. ಇವು ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ. ದಿನನಿತ್ಯದ ಸಂಭಾಷಣೆಯಲ್ಲಿ ಕೂಡ ಈ ರೀತಿಯ ಸ್ವಯಂ ಅವಹೇಳನಕಾರಿ ಹಾಸ್ಯ ಸರ್ವೆಸಾಮಾನ್ಯವಾಗಿ ಹೋಗಿರುವುದು ವಿಷಾದನೀಯ. ಸೂಕ್ಷ್ಮವಾಗಿ ಗಮನಿಸಿದರೆ ಇವು ಮನಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದು ತಿಳಿಯುತ್ತದೆ. ಮಾತಿನ ಭರಾಟೆ ಯಲ್ಲಿ ‘ನಮಗ್ಯಾರು ಬೀಳ್ತಾರೆ?’ ಎಂದು ಹೇಳುತ್ತೇವೆ. ಹಾಗಾದರೆ ಪ್ರೀತಿಗೆ ನಾವು ಯೋಗ್ಯ ರಲ್ಲವಾ? ಅಲ್ಲಿ ಬಿದ್ದಿರುವ ಟ್ರಾ್ಯಶ್ ಕ್ಯಾನ್ ನಾನು ಎಂದು ಹೇಳುವುದರಿಂದ ಪರೋಕ್ಷವಾಗಿ ನಮ್ಮ ಮನಸ್ಸಿನಲ್ಲಿ ಕೀಳರಿಮೆ ಮೂಡುತ್ತದೆ. ಟೀಚರ್ ಬೈದಾಗ ಬೇಜಾರಾಗುತ್ತದೆ. ಆದರೆ ಸ್ನೇಹಿತರು ನಮ್ಮ ಬಗ್ಗೆ ಜೋಕ್ ಮಾಡಿದರೆ ಹೆಚ್ಚಾಗಿ ನೋವಾಗುತ್ತದೆ. ಅದರ ಬಗ್ಗೆ ದೀರ್ಘವಾಗಿ ಆಲೋಚಿಸುತ್ತೇವೆ. ಅದು ಹಾಸ್ಯಕ್ಕೆ ಇರುವ ಶಕ್ತಿ. ಈಗ ನಮ್ಮ ಬಗ್ಗೆ ನಾವೇ ನಗಲು ಪ್ರಾರಂಭಿಸಿದ್ದೇವೆ. ಇದು ಪೂರ್ಣವಾಗಿ ಕೆಟ್ಟದ್ದಲ್ಲ. ಸಂದರ್ಭ ಬಹಳ ಮುಖ್ಯವಾಗುತ್ತದೆ. ಸೆಲ್ಪ್ ಜೋಕ್ ಮಾಡಿಕೊಳ್ಳುವುದರಿಂದ ಸ್ನೇಹಿತರ ಜತೆ ಒಳ್ಳೆಯ ಸಂಬಂಧ ಬೆಳೆಸಬಹುದು. ಕೆಲವೊಮ್ಮೆ ಇದಕ್ಕೆ ವ್ಯಂಗ್ಯ ಕೂಡ ಒಳ್ಳೆಯ ತಮಾಷೆ ಸೃಷ್ಟಿಯಾಗುತ್ತದೆ. ಆದರೆ ಅದು ಮುಂದುವರಿಯಬಾರದು. ‘ನಮಗ್ಯಾರು ಬೀಳ್ತಾರೆ?’ ಎಂಬ ವಾಕ್ಯ ಕ್ರಷ್ ಮುಂದೆ ಹೋಗಿ ನಿಂತಾಗ ತಲೆಯಲ್ಲಿ ಬರಬಾರದು. ನಾನು ದಡ್ಡ ಎಂಬುದು ಪರೀಕ್ಷೆ-ಇಂಟರ್ವ್ಯೂ ಮೊದಲಾದ ಸಂದರ್ಭದಲ್ಲಿ ಕಾಡುತ್ತಿದೆ ಎಂದರೆ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂದು ಪರಿಗಣಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ.
ಸೆಲ್ಪ್ ಜೋಕ್ ಶುರುವಾಗಿದ್ದು ಹೇಗೆ?
ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯ ಮತ್ತು ಸಾಧನೆಯ ಬಗ್ಗೆ ಅನುಮಾನ ಮತ್ತು ಆಂತರಿಕ ಭಯ ಹೆಚ್ಚಾಗಿ ಕಾಣಿಸಿಕೊಳ್ಳುವುದು ಇಂಪೋಸ್ಟರ್ ಸಿಂಡ್ರೋಮ್ ಎಂಬ ಮಾನಸಿಕ ಸಮಸ್ಯೆಯ ಗುಣಲಕ್ಷಣ. ಬಹುತೇಕ ಜೆನ್ ಝುಡ್ನವರು ಇಂಪೋಸ್ಟರ್ ಸಿಂಡ್ರೋಮ್ಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದಲೆ ಸೆಲ್ಪ್ ಟ್ರೋಲಿಂಗ್. ಈ ಮಾನಸಿಕ ಸಮಸ್ಯೆಗೆ ಮೊದಲು ಗುರಿಯಾದವರು ಮಿಲೇನಿಯಲ್ಸ್ ಎಂದು ಫೋರ್ಬ್ಸ್ ಸಂಸ್ಥೆಯ ಸಮೀಕ್ಷೆ ತಿಳಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಮೊದಲು ಒಳ್ಳೆಯ ಪೋಟೋ, ಸಾಧನೆಗಳ ಪಟ್ಟಿ, ಬುದ್ಧಿವಂತ ಮಾತು ಮುಂತಾದ ಪಾಸಿಟಿವ್ ವಿಷಯಗಳನ್ನು ಹೆಚ್ಚಾಗಿ ನೋಡಬಹುದಾಗಿತ್ತು. ತಮ್ಮ ವ್ಯಕ್ತಿತ್ವದ ಒಳ್ಳೆಯ ಅಂಶಗಳನ್ನು ಹಂಚಿಕೊಳ್ಳುತ್ತಿದ್ದರು. ಈಗಲೂ ಅವುಗಳನ್ನು ನೋಡಬಹುದು, ಆದರೆ ಸ್ವಯಂ ಅವಹೇಳನಕಾರಿ ಮಾತುಗಳ ಮಧ್ಯೆ ಮರೆಯಾಗುತ್ತಿವೆ. ಈ ಮನಸ್ಥಿತಿಗೆ ಕಾರಣವನ್ನು ಹುಡುಕುತ್ತ ಹೋದರೆ ಪಾಪ್ ಸಂಸ್ಕೃತಿಯ ಸಿನಿಮಾ, ಹಾಡು, ಶೋಗಳ ಕಡೆ ಮುಖ ಮಾಡಬೇಕಾಗುತ್ತದೆ. ಅಲ್ಲಿನ ಮಾತುಗಳಿಂದ ಪ್ರೇರಿತವಾಗಿ ಪ್ರತಿ ಸಂಭಷಣೆಯಲ್ಲೂ ಸ್ವಯಂ ಅವಹೇಳನಕಾರಿ ಹಾಸುಹೊಕ್ಕಾಗಿದೆ. ಸಾಧನೆಯನ್ನು ಮಾಡಿದಾಗ ಬಂಧು-ಮಿತ್ರರು ಶುಭಾಶಯವನ್ನು ಕೋರಿ ಹೊಗಳಿದಾಗ ಕೇವಲ ಲಕ್ ಎಂದು ಹೇಳುತ್ತಾರೆ. ಗೆಲುವಿಗೆ ಅವಶ್ಯಕತೆ ಇರುವ ಎಲ್ಲ ಪ್ರಯತ್ನಗಳನ್ನು ಮರೆತು ನಾನೇನೂ ಮಾಡಿಲ್ಲ ಎಂದು ಹೇಳಿ ನಾಚುವುದು ಎಷ್ಟು ಸರಿ? ಬಾಸ್ಟನ್ನಲ್ಲಿ ಹಾರ್ವರ್ಡ್ ವ್ಯವಹಾರ ವಿಮರ್ಶೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 70ಕ್ಕೂ ಹೆಚ್ಚು ಮಂದಿ ಹೊಗಳಿಕೆಯಿಂದ ಅನನುಕೂಲಕ್ಕೆ ಒಳಗಾಗುತ್ತಾರೆ ಎಂದು ತಿಳಿದು ಬಂದಿದೆ. ಕೆಲವರಿಗೆ ಪೊ›ತ್ಸಾಹದ ಮಾತಿನಿಂದ ಆತಂಕ ಸೃಷ್ಟಿಯಾಗುತ್ತದೆ. ಬಹಳ ಕಷ್ಟಪಟ್ಟು ಸಾಧನೆಯನ್ನು ಮಾಡಿರುತ್ತಾರೆ ಆದರೆ ಅದರಿಂದ ಸಿಗುವ ಅಭಿನಂದನೆಯನ್ನು ಸ್ವೀಕರಿಸುವ ದೈರ್ಯ ಇರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹೊಗಳಿಕೆಯ ಮಾತು ಹಾಗೂ ನನ್ನ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತಿಲ್ಲ ಎಂಬ ಭಾವನೆ ಇರುತ್ತದೆ. ಇದರ ಜತೆ ಮತ್ತೊಂದು ಕಾರಣ ಅತಿಯಾದ ವಿನಮ್ರತೆ. ಅದು ಒಳ್ಳೆಯದೇ, ಆದರೆ ಕೆಲಸಕ್ಕೆ ತಕ್ಕ ಪ್ರಶಂಸೆ ಬಂದರೆ ಜೋಕ್ಗೆ ನಕ್ಕಂತೆ ಹೊಗಳಿಕೆಗೂ ನಕ್ಕು ಸ್ವಾಗತಿಸಬೇಕು ಮತ್ತು ಹಂಚಿಕೊಳ್ಳಬೇಕು. ಇದರಿಂದ ಒಳ್ಳೆಯ ವಾತಾವರಣ ಸೃಷ್ಟಿ ಆಗುವುದರೊಂದಿಗೆ ಮುಂದಿನ ಕಾರ್ಯಗಳಿಗೆ ಪ್ರೇರಣೆಗೆ ಸಹಾಯವಾಗುತ್ತದೆ.
ಯುವ ಜನತೆ ಡಂಬ್ ಅಲ್ಲ
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ಯುವ ಪೀಳಿಗೆ ತಮ್ಮನ್ನು ಡಂಬ್ ಆಂಡ್ ಬ್ರೋಕ್ ಎಂದು ಹೇಳಿಕೊಳ್ಳುತ್ತಾರೆ. ಶೇ. 40ಕ್ಕೂ ಕಡಿಮೆ ಯುವಕ/ಯುವತಿಯರು ತಮ್ಮ ಭವಿಷ್ಯದ ಬಗ್ಗೆ ಒಳ್ಳೆಯ ಭಾವನೆ ಹೊಂದಿಲ್ಲ ಎಂದು ಡಿಲೋಯ್ಟ್ ಎಂಬ ಸಂಶೊಧನಾ ಸಂಸ್ಥೆಯ ವರದಿ ತಿಳಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಡದಿರುವ ವಿಷಯಗಳನ್ನು ಹಂಚಿಕೊಳ್ಳುವುದು. ಇದಕ್ಕೆ ಶಿಟ್ ಪೋಸ್ಟಿಂಗ್ ಎಂದು ಕರೆಯುತ್ತಾರೆ. ಅಂದರೆ ಶೇರ್ ಮಾಡುವ ವಿಷಯದಿಂದ ಯಾವುದೇ ಪ್ರಯೋಜನ ಇಲ್ಲದೆ ಇರುವುದು. ಬಾಳೆಹಣ್ಣಿನ ಸಿಪ್ಪೆಯ ಫೋಟೋ ತೆಗೆದು ಎಂಥ ಮೂರ್ಖ ನಾನು ಎಂಬ ಕ್ಯಾಪ್ಷನ್ ಜತೆ ಪೋಸ್ಟ್ ಮಾಡುತ್ತಾರೆ. ಈ ರೀತಿ ಮಾತಾಡಲು ಬಹಳ ಧೈರ್ಯ ಬೇಕು ಎಂಬ ಕಲ್ಪನೆ ಕೂಡ ಕೆಲವರಿಗೆ ಇದೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಅನಿಸಬಹುದು. ಬೇರೆಯವರಿಗೆ ಸಮಸ್ಯೆ ಆಗುವುದಕ್ಕಿಂತ ನಮ್ಮ ಮೇಲೆಯೇ ಪ್ರಭಾವ ಬೀರುತ್ತದೆ. ಕ್ರಮೇಣವಾಗಿ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ನಂಬಿಕೆ ಕಡಿಮೆಯಾಗುತ್ತಿದೆ ಎಂಬ ಅರಿವು ಕೂಡ ಇರುವುದಿಲ್ಲ. ದಡ್ಡತನವನ್ನು ಪದೇಪದೆ ಹೇಳುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕು. ಆತ್ಮವಿಶ್ವಾಸ ಮತ್ತು ಸೊಕ್ಕಿನ ನಡುವೆ ಇರುವ ವ್ಯತ್ಯಾಸದ ಬಗ್ಗೆ ಜನರೇಷನ್ ಝುಡ್ಗೆ ತಿಳಿದಿಲ್ಲ.
ಪಂಕ್ಚರ್ ಆಗಿಸದಿರಲಿ ಪಂಚ್ಲೈನ್
ಸ್ವಯಂ ಅವಹೇಳನಕಾರಿ ಕೇವಲ ಸಾಮಾಜಿಕ ಜಾಲತಾಣ, ಹಾಸ್ಯದ ಮಾತಿಗೆ ಸೀಮಿತವಾಗಿಲ್ಲ. ಇದೊಂದು ಮಾನಸಿಕ ಅಸ್ವಸ್ಥತೆಯಾಗಿದೆ. ಸೆಲ್ಪ್ ಜೋಕ್ನಿಂದ ಬೇಸರ ಹೆಚ್ಚಾಗುತ್ತದೆ. ಸ್ನೇಹಿತರ ಜತೆಗಿನ ಪ್ರತಿ ಸಂಭಾಷಣೆಯಲ್ಲೂ ಸಹಜವಾಗಿ ಎರಡನೇ ಆಲೋಚನೆ ಇಲ್ಲದೆ ಪಂಚ್ಲೈನ್ಗಳ ಮೂಲಕ ಟ್ರೋಲ್ ಮಾಡಿಕೊಳ್ಳಲು ಆರಂಭಿಸುತ್ತೇವೆ. ಇದು ಒಂಟಿಯಾಗಿ ಇದ್ದಾಗ ಕೂಡ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ಇದರಿಂದ ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳು ಕಾಡುವ ಸಾಧ್ಯತೆ ಇವೆ.
ಹಾಸ್ಯಪ್ರಜ್ಞೆ ಮುಖ್ಯ, ಆದರೆ..
ನಮ್ಮ ಬಗ್ಗೆ ಹಾಸ್ಯ ಮಾಡಿಕೊಳ್ಳುವುದು ತಪ್ಪು, ಇತರರ ಕಾಲೆಳೆಯುವುದರಿಂದ ಅವರಿಗೆ ಬೇಜಾರಾಗುತ್ತದೆ. ಹಾಗಾದರೆ ಕಾಮಿಡಿ ಮಾಡಲೇಬಾರದಾ? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಸ್ವಯಂ ಅವಹೇಳನಕಾರಿ ಹಾಸ್ಯ ನಿಗ್ರಹಿಸಿದ ಕೋಪದ ಮೂಲ ಎಂದು ಸಂಶೋಧನೆಗಳು ತಿಳಿಸುತ್ತವೆ. ಸೆಲ್ಪ್ ಜೋಕಿಂಗ್ನಿಂದ ಪೇಚಿಗೆ ಸಿಲುಕುವ ಸಂದರ್ಭದಿಂದ ತಪ್ಪಿಸಿಕೊಳ್ಳಬಹುದು. ಮನುಷ್ಯನಿಗೆ ಹಾಸ್ಯಪ್ರಜ್ಞೆ ಮುಖ್ಯ. ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಿಸುತ್ತದೆ. ಆದರೆ ಆ ಹಾಸ್ಯ ನಮನ್ನು ಕುಗ್ಗಿಸದಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞ ಮತ್ತು ಹಾಸ್ಯ ಸಂಶೋಧಕ ಡಾ. ಅರ್ನಿ ಕಣ್ ಹೇಳುತ್ತಾರೆ. ನಮ್ಮ ಬಗ್ಗೆ ತಮಾಷೆ ಮಾಡಿಕೊಳ್ಳುವ ಮೊದಲು ಒಮ್ಮೆ ಯೋಚಿಸಬೇಕು. ಸ್ವಯಂ ಅಪಹಾಸ್ಯವನ್ನು ನಮ್ಮ ಅಭದ್ರತೆಗಳನ್ನು ಮರೆಮಾಚಿಕೊಳ್ಳಲು ಬಳಸಿಕೊಳ್ಳಬಾರದು.