

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಮಿಲಿಟರಿ ಮದ್ಯ ಮಾರಾಟ ದಂಧೆ ಜೋರಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 8 ತಿಂಗಳಲ್ಲಿ 6,835 ಲೀ. ಡಿಫೆನ್ಸ್ ಮದ್ಯ ಜಪ್ತಿ ಮಾಡಲಾಗಿದೆ. ಬೆಳಗಾವಿ ವಿಭಾಗದಲ್ಲೇ ಅತಿ ಹೆಚ್ಚು 5,746 ಲೀ. ಮದ್ಯ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ನಿವೃತ್ತ ಮಿಲಿಟರಿ ಸೈನಿಕರಿಗೆ 4, ವೃತ್ತಿಯಲ್ಲಿರುವವರಿಗೆ 5 ಹಾಗೂ ಕರ್ನಲ್, ಕಮಾಂಡರ್ ಸೇರಿ ಇತರ ರ್ಯಾಂಕಿಂಗ್ ಆಧಾರಿತ ಅಧಿಕಾರಿಗಳಿಗೆ ತಿಂಗಳಿಗೆ ಇಂತಿಷ್ಟು ಮದ್ಯವನ್ನು ರಕ್ಷಣಾ ಇಲಾಖೆ ನಿಗದಿಪಡಿಸಿದೆ. ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್(ಸಿಎಸ್ಡಿ)ನಲ್ಲಿ ಇವರಿಗೆ ಬ್ರಾಂಡೆಂಡ್ ಮದ್ಯಕ್ಕೆ ಶೇ.60ರವರೆಗೆ ರಿಯಾಯಿತಿ ಸಿಗಲಿದೆ. ಮಿಲಿಟರಿ ಸಿಬ್ಬಂದಿ ಗುರುತಿನ ಚೀಟಿ ತೋರಿಸುವ ಮೂಲಕ ಡಿಸ್ಕೌಂಟ್ ದರದಲ್ಲಿ ಡಿಫೆನ್ಸ್ ಮದ್ಯ ಖರೀದಿಸಲು ಅವಕಾಶವಿದೆ. ಮದ್ಯ ಸೇವನೆ ಮಾಡದವರೂ ಖರೀದಿಸಿ ಬೇರೆಯವರಿಗೆ ನೀಡುತ್ತಾರೆ. ಇಂಥವರು ಡಿಫೆನ್ಸ್ ಮದ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಿಲಿಟರಿ ಕೋಟಾ ದುರ್ಬಳಕೆ ಮಾಡಿಕೊಂಡು ಕೆಲ ದಂಧೆಕೋರರು ಕಡಿಮೆ ಮೊತ್ತದ ಮದ್ಯವನ್ನು ಬ್ರಾಂಡೆಂಡ್ ಬಾಟಲಿಗೆ ತುಂಬಿ ಮಿಲಿಟರಿ ಎಣ್ಣೆಯೆಂದು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್ಡಿಯಲ್ಲಿ 10 ಸಾವಿರ ರೂ. ಮೌಲ್ಯದ ಡಿಫೆನ್ಸ್ ಮದ್ಯದ ಬಾಟಲಿಗೆ 4 ಸಾವಿರ ರೂ.ಗೆ ಮಿಲಿಟರಿ ಸಿಬ್ಬಂದಿಗೆ ನೀಡಲಾಗುತ್ತದೆ. ಅದೇ ಬಾಟಲ್ ಅನ್ನು ಹೊರಗಡೆ ತಂದು 5-7 ಸಾವಿರ ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ನಡೆಯುತ್ತಿದ್ದ ಈ ದಂಧೆ ಗ್ರಾಮೀಣ ಭಾಗದ ಸಣ್ಣ-ಪುಟ್ಟ ಅಂಗಡಿಗಳಿಗೂ ವಿಸ್ತರಣೆಯಾಗಿದೆ.
ನಶೆಯಲ್ಲಿ ಗ್ರಾಮಗಳು: ರಾಜ್ಯದ 25 ಸಾವಿರ ಹಳ್ಳಿಗಳು ಅಕ್ರಮ ಮದ್ಯದ ನಶೆಯಲ್ಲಿ ತೇಲಾಡುತ್ತಿವೆ. ಕಿರಾಣಿ ಅಂಗಡಿ, ಮನೆಗಳು ಹಾಗೂ ಮಾಂಸಾಹಾರಿ ಹೋಟೆಲ್ಗಳಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡಲಾಗುತ್ತಿದೆ. ಈ ಮಾರಾಟದಿಂದಲೇ ಪ್ರತಿ ವರ್ಷ ಅಂದಾಜು 4 ಸಾವಿರ ಕೋಟಿ ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿದೆ. ಪ್ರತಿ ವರ್ಷ ಸಾವಿರಾರು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾದರೂ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ನಾಮ್ ಕೇ ವಾಸ್ತೆ ಎಂಬಂತೆ ಅಧಿಕಾರಿಗಳು ಕೇಸ್ ದಾಖಲಿಸಿ ಲಂಚ ಪಡೆದು ಸುಮ್ಮನಾಗುತ್ತಾರೆ.
ನಕಲಿ ಮದ್ಯ ದಂಧೆ ಜೋರು: ಚೀಪ್ ಲಿಕ್ಕರ್ ಅನ್ನು ದುಬಾರಿ ಬಾಟಲಿಗೆ ತುಂಬಿ ಬ್ರಾ$್ಯಂಡೆಡ್ ಮದ್ಯವೆಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಕೆಲ ಮದ್ಯದಂಗಡಿ ಮಾಲೀಕರು, ಮುಂಬೈ ಸೇರಿ ಇತರ ನಗರಗಳಲ್ಲಿ 300 ರೂ.ಗೆ ಸಿಗುವ ಪುಲ್ ಬಾಟಲ್ ತಂದು ದುಬಾರಿ ಬೆಲೆಯ ಖಾಲಿ ಬಾಟಲ್ಗಳಿಗೆ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ಈ ದಂಧೆಯಿಂದ ಮಾಲೀಕರು ಲಾಂತರ ರೂ.ಹಣ ಮಾಡಿಕೊಳ್ಳುತ್ತಿದ್ದಾರೆ. 2024ರ ಜು.1ರಿಂದ 2025ರ ಜ.25ರವರೆಗೆ 818 ಲೀ. ನಕಲಿ ಮದ್ಯ ವಶಪಡಿಸಿಕೊಳ್ಳಲಾಗಿದೆ.
2.03 ಲಕ್ಷ ಲೀಟರ್ ವಶ: ರಾಜ್ಯದಲ್ಲಿ 2024ರ ಜು.1ರಿಂದ 2025ರ ಜ.25ರವರೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 2,03,599 ಲೀ.ಮದ್ಯ, 2,45,829 ಲೀ. ಬಿಯರ್ ಮತ್ತು 3,09,446 ಲೀ.ವೈನ್ ವಶಪಡಿಸಿಕೊಳ್ಳಲಾಗಿದೆ. ಜತೆಗೆ, ಕರ್ನಾಟಕದಲ್ಲಿ ಮಾರಾಟಕ್ಕೆ ಅನುಮತಿ ಇಲ್ಲದ 14,850 ಲೀ.ಮದ್ಯ ವಶಕ್ಕೆ ಪಡೆಯಲಾಗಿದೆ. ಗೋವಾ ಸೇರಿ ಇತರ ರಾಜ್ಯಗಳ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಆದರೂ, ಅಂತಾರಾಜ್ಯ ಜಾಲ ಹೊರ ರಾಜ್ಯಗಳ ಮದ್ಯವನ್ನು ರಾಜ್ಯಕ್ಕೆ ಅಡ್ಡದಾರಿಯಲ್ಲಿ ಸಾಗಿಸುತ್ತಿದೆ. ಖಾಸಗಿ ವಾಹನ, ಬೋಟ್, ದೋಣಿ ಹಾಗೂ ಯಾಂತ್ರೀಕೃತ ಬೋಟ್ಗಳ ಮೂಲಕ ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಪೊಲೀಸ್, ಕರಾವಳಿ ಕಾವಲು ಪಡೆ ಕಣ್ತಪ್ಪಿಸಿ ಮದ್ಯ ನುಸುಳುತ್ತಲೇ ಇರುವುದು ನಡೆಯುತ್ತಿದೆ.
ಡಿಫೆನ್ಸ್ ಮದ್ಯ ವಶದ ವಿವರ
ವಿಭಾಗ ಮದ್ಯ(ಲೀ.ಗಳಲ್ಲಿ)
ಬೆಳಗಾವಿ 5,746
ಬೆಂಗಳೂರು ದಕ್ಷಿಣ 488
ಬೆಂಗಳೂರು ಉತ್ತರ 392
ಮೈಸೂರು 81
ಬೆಂ.ಗ್ರಾಮಾಂತರ 49
ಹೊಸಪೇಟೆ 24
ಕಲಬುರಗಿ 30