ಪ್ರೀಮಿಯಂ ಎಫ್​​ಎಆರ್​ ನೀತಿಗೆ ತೀವ್ರ ವಿರೋಧ: ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ

FAR
Published on

ಬೆಂಗಳೂರು: "ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ'(ಪ್ರೀಮಿಯಂ ಎಫ್​​ಎಆರ್​) ನೀತಿಗೆ ಕಾನೂನು ತಜ್ಱರು, ನಗರ ಯೋಜಕರು, ಭೂಮಾಲೀಕರಿಂದ  ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರೀಮಿಯಂ ಎಫ್​​ಎಆರ್​ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳಿಗೆ ಅನ್ವಯವಾಗುವಂತೆ ನಗಾರಾಭಿವೃದ್ಧಿ ಇಲಾಖೆ ಕಳೆದ ತಿಂಗಳು ಕರಡು ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ವಿಚಾರಣಾ ಹಂತದಲ್ಲಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ&2015 ಸಕ್ಷನ್​ 13-ಇಗೆ ವಿವಾದಿತ ತಿದ್ದುಪಡಿ ಅನುಸಾರ ಸದರಿ ನಿಯಮಗಳಿಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಪ್ರೀಮಿಯಂಎಫ್​​ಎಆರ್ ಪರಿಷ್ಕೃತ ಮಾಸ್ಟರ್​ ಪ್ಲಾನ್​-2015ರ ವಲಯ ನಿಯಮ ಬದಲಾಯಿಸಲಾಗಿದೆ. ಅದರಂತೆ, ನಿವೇಶನ ಮಾರ್ಗಸೂಚಿ ದರದ ಶೇ.28 ಶುಲ್ಕ ಪಾವತಿಸಿಕೊಂಡು, ಶೇ.60ರವರೆಗೂ ಪ್ರೀಮಿಯಂ ಎಫ್​​ಎಆರ್​ ನೀಡಲು ಅವಕಾಶ ಕಲ್ಪಿಸಲಾಗಿದೆ. ನಕ್ಷೆ ಅನುಮೋದನೆಗೊಂಡು ಕಟ್ಟಡ ನಿರ್ಮಾಣ ಮಾಡಿರುವವರ ಹಾಗೂ ನಿರ್ಮಾಣ ಮಾಡುತ್ತಿರುವವರು ಪ್ರೀಮಿಯಂ ಎಫ್​​ಎಆರ್ ಪಡೆದುಕೊಂಡು, ಹೆಚ್ಚುವರಿ ಅಂತಸ್ತು ನಿರ್ಮಿಸಬಹುದಾಗಿದೆ. ಕಟ್ಟಡ ನಿರ್ಮಿಸುವವರು ಮಾರ್ಗಸೂಚಿ ದರನ್ವಯ ಶುಲ್ಕ ಪಾವತಿಸಿ ಪ್ರೀಮಿಯಂ ಎಫ್​​ಎಆರ್​ಗಳನ್ನು ಸ್ಥಳಿಯ ಯೋಜನಾ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದು. ಈ ಮೂಲಕ ಕಟ್ಟಡದ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್​​ಎಆರ್​ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು.

ಅಲ್ಲದೆ, ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್​ ಪ್ಲಾನ್​ನ ವಲಯ ನಿಯಮಗಳ ಅನ್ವಯವೇ ಎಫ್​​ಎಆರ್​ಗೆ ಅನುಮತಿ ನೀಡಲಾಗುತ್ತದೆ.ಶೇ.20 ಪ್ರೀಮಿಯಂ ಎಫ್​​ಎಆರ್ ನೀಡಲಾಗುತ್ತದೆ. 12 ಮೀಟರ್​ನಿಂದ 18 ಮೀಟರ್​ ಅಗಲದ ರಸ್ತೆ ಹೊಂದಿರುವ ಕಟ್ಟಡಗಳಿಗೆ ಶೇ.40 ಹಾಗೂ 18 ಮೀಟರ್​ಗಿಂತ ಅಧಿಕ ಅಗಲ ಹೊಂದಿರುವ ಕಟ್ಟಡಗಳು ಶೇ.60 ಗರಿಷ್ಠ ಪ್ರೀಮಿಯಂ ಎಫ್​​ಎಆರ್ ಪಡೆಯಬಹುದು ಎಂದು ನಿಯಮದಲ್ಲಿ ವಿವರಿಸಲಾಗಿದೆ. ಪ್ರೀಮಿಯಂ ಎಫ್​​ಎಆರ್ ನೀತಿ ಜನರಿಗೆ ಅನುಕೂಲಗಿಂತ ಅನನುಕೂಲವೇ ಜಾಸ್ತಿ ಇದೆ. ರಾಷ್ಟ್ರೀಯ ನಗರ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿ ಜಾರಿಯಾಗುವ ಇದನ್ನು ಪರಿಷ್ಕರಿಸುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ನಗರ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ವಕೀಲ ಪ್ರಶಾಂತ್​ ಮಿರ್ಲೆ, ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದಾರೆ. ಇದು ಸದ್ಯ ವಿಚಾರಣೆ ಹಂತದಲ್ಲಿದೆ.

ಏನೇನು ಅನನುಕೂಲ?

ಬೆಂಗಳೂರು ನಗರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಮತ್ತು ಬಿಎಂಆರ್​ಡಿಎಯಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ನೀತಿಯಿಂದ ನಗರದಲ್ಲಿ ನಾಯಿಕೊಡೆಗಳಂತೆ ಎತ್ತರದ (ಹೈರೈಸಿಂಗ್​) ಕಟ್ಟಡಗಳು ತಲೆ ಎತ್ತಲಿವೆ. ಅತಿಯಾಗಿ ಜನಸಂದಣಿ ಹೆಚ್ಚಾಗುವುದರಿಂದ ಹೈರೈಸಿಂಗ್​ ಕಟ್ಟಡಗಳ ಪ್ರದೇಶದಲ್ಲಿ ನೀರು, ಒಳಚರಂಡಿ, ರಸ್ತೆ ಸೇರಿ ಇತರೆ ಮೂಲ ಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಕಟ್ಟಡ ದಟ್ಟಣೆ ಹೆಚ್ಚಾದರೆ ಮಳೆ ನೀರು ಸಂಗ್ರಹ ಮತ್ತು ನೆರೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಇದು ಅಸ್ಪಷ್ಟತೆಯಿಂದ ಕೂಡಿದೆ. ಭವಿಷ್ಯದಲ್ಲಿ ದೊಡ್ಡ ಯೋಜನೆಗಳಿಗೆ, ಸಮಾಜಕ್ಕೆ ಹಾನಿಕಾರಕವಾಗಲಿದೆ. ಸಮಗ್ರ ಯೋಜನೆಗಳ ಆಧಾರವಿಲ್ಲದೆ ಇದು ಜಾರಿಗೆಯಾಗುತ್ತಿದೆ. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ನಗರ ಪರಿವರ್ತನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 9 ಮೀಟರ್​ ಅಗಲದ ರಸ್ತೆಗಳಲ್ಲಿ ಎತ್ತರ ಕಟ್ಟಡಗಳಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ಕಟ್ಟಡ ಯೋಜನೆ ಲಾಭ ಡೆವಲಪರ್​ಗಳಿಗೆ ಮಾತ್ರ ಸಿಗುತ್ತದೆ. ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಶಾಲೆಗಳು, ಆಸ್ಪತ್ರೆಗಳು, ಸಾರ್ವಜನಿಕ ಉದ್ಯಾನಗಳಿಗೆ ಸ್ಥಳ ದೊರೆಯುವುದಿಲ್ಲ. ಇದೊಂದು ನಗರ ಅಭಿವೃದ್ಧಿ ಹೆಸರಿನಲ್ಲಿ ವಿವಾದ ಹುಟ್ಟುಹಾಕುತ್ತಿರುವ ನಿಯಮ ಇದಾಗಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಲ್ಲಿ ತಮ್ಮ ಜಮೀನು ಬಿಟ್ಟುಕೊಟ್ಟು ಟಿಡಿಆರ್​ ಪ್ರಮಾಣ ಪತ್ರ ಪಡೆಯುವ ಭೂಮಾಲೀಕರ ಹಕ್ಕುಗಳಿಗೆ ಧಕ್ಕೆ ತರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net