ಹರಾಜು ಮಾರುಕಟ್ಟೆಯಲ್ಲೇ ತಂಬಾಕು ಮಾರಾಟ ಮಾಡಿ

Published on

ಅರಕಲಗೂಡು: ಪ್ರಸಕ್ತ ವರ್ಷ ಹೊಗೆಸೊಪ್ಪಿಗೆ ಉತ್ತಮ ದರ ದೊರಕಿದ್ದು ಬೆಳೆಗಾರರು ತಾವು ಉತ್ಪಾದಿಸಿದ ತಂಬಾಕನ್ನು ನಿಯಮಬಾಹಿರವಾಗಿ ಹೊರಗಿನವರಿಗೆ ಇಲ್ಲ ಮಧ್ಯವರ್ತಿಗಳಿಗೆ ನೀಡದೆ ಹರಾಜು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿಕೊಳ್ಳಬೇಕು ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರು ಸೂಚಿಸಿದ್ದಾರೆ ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕ ನಿವೇಶ್‌ಕುಮಾರ್ ಪಾಂಡೆ ತಿಳಿಸಿದ್ದಾರೆ.

ಇಲ್ಲಿನ ಎಫ್‌ಸಿವಿ ತಂಬಾಕು ಬೆಳೆಗಾರರ ಕೋರಿಕೆಯಂತೆ ಅಗತ್ಯವಿರುವ ರೈತರಿಗೆ ತಮ್ಮ ತಂಬಾಕು ಮಾರಾಟ ಮಾಡಲು ಅವಕಾಶವನ್ನು ಒದಗಿಸುವ ಸಲುವಾಗಿ ತಂಬಾಕು ಮಂಡಳಿಯು 2023-24ನೇ ಸಾಲಿನ ಹರಾಜು ಪ್ರಕ್ರಿಯೆಯನ್ನು ನಿಗದಿಂತ ಮುಂಚಿತವಾಗಿ ಪ್ರಾರಂಭಿಸಲಾಗಿದೆ. ಈ ಬಾರಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇಲ್ಲಿನ ತಂಬಾಕು ಬೆಳೆಗಾರರು ಆಳವಡಿಸಿಕೊಂಡ ಉತ್ತಮ ಕೃಷಿ ಪದ್ಧತಿಗಳಿಂದಾಗಿ ಕರ್ನಾಟಕದಲ್ಲಿ ಅಂದಾಜು 80-81 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಯಾಗಿದೆ. ಉತ್ತಮ ಮತ್ತು ಮಧ್ಯಮ ದರ್ಜೆಯ ತಂಬಾಕು ಕಳೆದ ವರ್ಷಗಳಿಗೆ ಹೋಲಿಸಿದರೆ ಶೇಕಡವಾರು ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷವಾಗಿ ಈ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕ ತಿಳಿ ಮಣ್ಣಿನ ರೂಪಾಂತರದ ಎಫ್‌ಸಿವಿ ತಂಬಾಕಿಗೆ ಜಾಗತಿಕ ಬೇಡಿಕೆ ಹೆಚ್ಚಿದೆ. ಈ ಸಾಲಿಗೆ ಸಕಾರಾತ್ಮಕವಾಗಿ ಪ್ರಾರಂಭವಾಗಿದ್ದು ಹರಾಜು ದರ ಉತ್ತಮವಾಗಿ ಮುಂದುವರಿಯುವ ನಿರೀಕ್ಷೆಯಿದೆ. ಕಳೆದ ವರ್ಷ ಪ್ರತಿ ಕೆ.ಜಿ ತಂಬಾಕಿಗೆ ದೊರೆತಿದ್ದ ಸರಾಸರಿ 200 ರೂ. ದರಕ್ಕೆ ಹೋಲಿಸಿದರೆ ಈ ವರ್ಷ ಆರಂಭಿಕ ಬೆಲೆ ಪ್ರತಿ ಕೆ.ಜಿ ತಂಬಾಕಿಗೆ 230 ರೂ. ಆಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ.15ರಷ್ಟು ಹೆಚ್ಚಿದ್ದು ಹರಾಜಿನ ಸರಾಸರಿ ಬೆಲೆಗಿಂತ ದುಪ್ಪಟ್ಟಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ತಂಬಾಕು ಮಂಡಳಿಯು ಮೊದಲ ಬಾರಿಗೆ ಕರ್ನಾಟಕದ ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪಿನ ಹುಡಿ ಮಾರಾಟಕ್ಕೆ ಅನುಮತಿ ನೀಡುವ ನಿರ್ಧಾರ ತೆಗೆದುಕೊಂಡಿತ್ತು. ಈ ವರ್ಷವೂ ತಂಬಾಕು ಹುಡಿಯನ್ನು ಹರಾಜು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಅನುಮತಿ ನೀಡಲಾಗುವುದು. ಅ. 3ರಿಂದ ತಂಬಾಕು ಬೇಲುಗಳ ಹರಿವನ್ನು ಹೆಚ್ಚಿಸಲು ನಿರ್ಧರಿಸುವುದರಿಂದ ಎಫ್‌ಸಿಪಿ ತಂಬಾಕು ಬೆಳೆಗಾರರು ಸಕ್ರಿಯವಾಗಿ ಭಾಗವಹಿಸಬೇಕು. ಹೆಚ್ಚು ಬೇಲುಗಳನ್ನು ಮಾರಾಟಕ್ಕೆ ತರಬೇಕು. ಎಲ್ಲ ರೈತರು ಕ್ಲಸ್ಟರ್ ವೇಳಾ ಪಟ್ಟಿಯಂತೆ ಮಾರುಕಟ್ಟೆಯಲ್ಲಿ ತಂಬಾಕನ್ನು ಮಾರಾಟ ಮಾಡಿಕೊಳ್ಳಬೇಕು ಎಂದು ನಿವೇಶ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net