

ಸುಳ್ಯ: ನಾಗಮಂಗಲದಲ್ಲಿ ನಡೆದಂತಹ ಘಟನೆಗಳು ಮರುಕಳಿಸದಂತಾಗಲು ಹಿಂದುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಸ್ತ್ರ ಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ನ.ಪಂ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು.
ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ವೇಳೆ ಕಲ್ಲುತೂರಾಟ ಖಂಡಿಸಿ ಹಿಂದು ಸಂಘಟನೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ, ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇದೇ ರೀತಿಯ ದಬ್ಬಾಳಿಕೆ ನಡೆದರೆ ಮುಂದೆ ಸಂಘರ್ಷದ ದಿನಗಳು ಬರಲಿವೆ. ಹಿಂದುಗಳು ತಮ್ಮ ರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ಮುಖಂಡ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕಪಿಮುಷ್ಠಿಯಲ್ಲಿರುವ ಪೊಲೀಸ್ ಇಲಾಖೆ, ಎಲ್ಲ ಅನ್ಯಾಯಗಳನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತಿದೆ. ಇದೇ ರೀತಿಯ ವ್ಯವಸ್ಥೆಯಿಂದಾಗಿ ಭಾರತ ಇಸ್ಲಾಮೀಕರಣವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖಂಡರಾದ ಶಿವಾನಂದ ಕುಕ್ಕುಂಬಳ, ಸೋಮಶೇಖರ ಪೈಕ, ಪಿ.ಕೆ.ಉಮೇಶ್, ವಿಕ್ರಮ್ ಅಡ್ಪಂಗಾಯ, ಚಂದ್ರಶೇಖರ ಅಡ್ಪಂಗಾಯ, ವರ್ಷಿತ್ ಚೊಕ್ಕಾಡಿ, ಅಶೋಕ ಅಡ್ಕಾರು, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ದೇವಿಪ್ರಸಾದ್ ಅತ್ಯಾಡಿ, ರೂಪೇಶ್ ಪೂಜಾರಿಮನೆ, ಭರತ್ ಪಿ.ಯು ಮತ್ತಿತರರು ಭಾಗವಹಿಸಿದ್ದರು.