

ಬೆಳ್ತಂಗಡಿ: ತುಳು ಲಿಪಿಗೆ ಯೂನಿಕೋಡ್ ಮಾನ್ಯತೆ ನೀಡಿದ್ದು, ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಸಂಘ ವಾಣಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕಾಲೇಜಿನಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜತೆಗೆ, ತುಳು ತಿಗಳಾರಿ ಎಂದು ಯೂನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಪ್ರಯತ್ನಕ್ಕೆ ಈಗ ಹೆಚ್ಚಿನ ಮಹತ್ವ ಬಂದಿದೆ ಎಂದರು.
ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿ, ತುಳುವಿನ ಬಗ್ಗೆ ಅನೇಕ ಸಂಶೋಧನೆಗಳು ಆಗಬೇಕು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಮ್ಮದಾಗಬೇಕು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ, ಕೊರಗ ಸಮುದಾಯ ಮಾತನಾಡುವ ಒಂದು ಭಾಷೆ ಇದ್ದು, ಇಂದಿನ ಯುವಕರಲ್ಲಿ ಕೇಳಿದರೆ ಅವರಿಗೆ ತಿಳಿದಿಲ್ಲ. ಎಷ್ಟೇ ಪರಿವರ್ತನೆಗಳಾದರೂ ಮೂಲ ಪರಂಪರೆ ಮರೆಯಬಾರದು ಎಂದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ ಉಪಸ್ಥಿತರಿದ್ದರು. ತುಳು ಶಿಕ್ಷಕಿ ಸಂಧ್ಯಾ, ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜಿನ 55 ಮಂದಿ ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದರು.
ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ತುಳು ಸಂಘ ಸಂಯೋಜಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು.
ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟ ಸ್ಥಾನವಿದೆ. ತುಳುವಿಗೆ ಸತ್ವ-ಭಾಷಾ ಸಂಪತ್ತಿದೆ. 1856ರಲ್ಲಿ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಬರೆದ ರಾಬರ್ಟ್ ಕಾಲ್ದವೆಲ್, ತುಳು ಚೆನ್ನಾಗಿ ಬೆಳವಣಿಗೆ ಹೊಂದಿದ ಭಾಷೆ ಎಂದು ಕೊಂಡಾಡಿದ್ದಾನೆ. ಪಾಲ್ತಾಡಿ ರಾಮಕೃಷ್ಣ ಅಚಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರೌಢ ಶಾಲಾಮಟ್ಟದಲ್ಲಿ ಒಂದು ಪಾಠವಾಗಿ ತುಳು ಬಂದಿತ್ತು. ಕಳೆದ ಶೈಕ್ಷಣಿಕ ಅವಧಿಯಲ್ಲಿ ಜಿಲ್ಲೆಯಲ್ಲಿ 333 ಮಕ್ಕಳು ತುಳು ಪಾಠದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅವರೆಲ್ಲರನ್ನು ಅಕಾಡೆಮಿ ಪುರಸ್ಕರಿಸಿದೆ ಎಂದು ತಾರಾನಾಥ ಗಟ್ಟಿ ಹೇಳಿದರು.