

ರಟ್ಟಿಹಳ್ಳಿ: ಕರೊನಾ ಸೋಂಕಿತರು ಯಾವುದೇ ಕಾರಣಕ್ಕೂ ಭಯಪಡದೆ ಆತ್ಮಸ್ಥೆರ್ಯದಿಂದ ಇರಬೇಕು. ಗುಣವಾಗುತ್ತೇನೆ ಎನ್ನುವ ಆಶಾಭಾವನೆ ಹೊಂದಿದಾಗ ಆರೋಗ್ಯ ಸುಧಾರಿಸುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ನೇಶ್ವಿ, ಕುಂಚೂರು ಮತ್ತು ತೋಟಗಂಟಿ ಗ್ರಾಮದಲ್ಲಿ ಕರೊನಾದಿಂದ ಮೃತಪಟ್ಟ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಮಂಗಳವಾರ 50 ಸಾವಿರ ರೂಪಾಯಿ ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು.
ಕೋವಿಡ್- 19 ಸೋಂಕಿನಿಂದ ಮೃತಪಟ್ಟವರ ಕುಟುಂಬದವರು ಧೃತಿಗೆಡಬಾರದು. ದುಃಖ ಸಹಿಸಿಕೊಂಡು ಜೀವನ ಮುನ್ನಡೆಸಬೇಕು. ಮಹಾಮಾರಿ ವೈರಸ್ ಬಗ್ಗೆ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾರೂ ನಿರ್ಲಕ್ಷಿಸಬಾರದು. ಪರಿಸ್ಥಿತಿ ತುಂಬಾ ಗಂಭೀರವಾಗಿರುವುದರಿಂದ ಹೆಚ್ಚಾಗಿ ಮದುವೆ, ಗೃಹ ಪ್ರವೇಶದಂತಹ ಸಮಾರಂಭಗಳನ್ನು ಎಲ್ಲರೂ ಮುಂದೂಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕುಂಚೂರ ಗ್ರಾಮದ ಪರಮೇಶಪ್ಪ ಮಟ್ಟಿಮನಿ, ನೇಶ್ವಿ ಗ್ರಾಮದ ಗದಿಗೆಮ್ಮ ಕಾಯಕದ ಮತ್ತು ತೋಟಗಂಟಿ ಗ್ರಾಮದ ಪೂಜಾ ಅಂಗಡಿ ಅವರ ಮನೆಗೆ ಭೇಟಿ ನೀಡಿ ಪರಿಹಾರದ ಹಣ ವಿತರಿಸಲಾಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ತಾಲೂಕಿನ ಕಡೂರು ಗ್ರಾಮದ ಸೋಂಕಿತನ ಪತ್ನಿ, ನನ್ನ ಪತಿಗೆ ಉಸಿರಾಟದ ಸಮಸ್ಯೆ ಇದೆ. ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ ಎಂದು ಸಚಿವರ ಎದುರು ಅಳಲು ತೋಡಿಕೊಂಡರು. ಆಗ ಸಚಿವರು ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಕುರಿತು ವೈದ್ಯರನ್ನು ವಿಚಾರಿಸಿದರು. ಸೋಂಕಿತ ಕಳೆದ ವಾರದಿಂದ ಶೀತ, ಜ್ವರದಿಂದ ಬಳಲುತ್ತಿದ್ದು, ಕೋವಿಡ್-19 ಸೋಂಕು ದೃಡಪಟ್ಟಿದೆ. ಇವರಿಗೆ ವೆಂಟಿಲೇಟರ್ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದರು. ಆಗ ಸಚಿವರು ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಸೂಚಿಸಿ, ಜಿಲ್ಲಾ ಕೇಂದ್ರಕ್ಕೆ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಕಳುಹಿಸಿಕೊಟ್ಟರು.