ವಿದೇಶ ಅಧ್ಯಯನ ಪ್ರವಾಸಕ್ಕೆ 10 ವಿದ್ಯಾರ್ಥಿಗಳ ಆಯ್ಕೆ

Selection of 10 students for study abroad tour
ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಿಂದ ವಿದೇಶ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಕಾಲೇಜು ಸಿಬ್ಬಂದಿ. ಪ್ರಭಾರ ವಿದ್ಯಾಧಿಕಾರಿ ಡಾ. ಶ್ರೀಶೈಲ ಗೋಟ್ಯಾಳ, ಐಡಿಪಿ ಯೋಜನೆಯ ಮುಖ್ಯಸ್ಥ ಡಾ. ಎಸ್.ಬಿ. ಪಾಟೀಲ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್-ಸಾಂಸ್ಥಿಕ ಅಭಿವೃದ್ಧಿ ಯೋಜನೆಯಡಿ ವಿದೇಶ ಪ್ರವಾಸಕ್ಕೆ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಹೇಮಲತಾ ಸಿ, ಶುಷ್ಮಾ ಆಯಟ್ಟಿ, ಹೇಮಾವತಿ ಬಾವಿ, ಪೃಥ್ವಿ ಜಿ.ಎಸ್, ಸ್ನೇಹಾ ರಾಮಚಂದ್ರ ಯಡಕೆ, ಮೂಲಾ ಸುಮಾಶ್ರೀ, ಗುಂಜನ್, ಸ್ನೇಹಾ ಬಳಿಗಾರ, ಸ್ವಾತಿ ಉಮ್ಮಾಗೋಳ ಮತ್ತು ಎಲ್. ಸುಚಿತ್ರಾ ಆಯ್ಕೆಯಾದ ವಿದ್ಯಾರ್ಥಿಗಳು.

ಆಸ್ಟ್ರೇಲಿಯಾ, ಫಿನಲ್ಯಾಂಡ್, ಮಲೇಶಿಯಾ ಮತ್ತು ಥೈಲ್ಯಾಂಡ್ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ತೆಗೆದುಕೊಳ್ಳುವ ಅವಕಾಶವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಈ ವಿದ್ಯಾರ್ಥಿಗಳಿಗೆ ಕಲ್ಪಿಸಿದೆ.

ಜಾಗತಿಕ ಬ್ಯಾಂಕ್ ಧನಸಹಾಯದೊಂದಿಗೆ ಸಾಂಸ್ಥಿಕ ಅಭಿವೃದ್ಧಿ ಯೋಜನೆಯಡಿ ಈ ವರ್ಷ 70 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದಿಂದ ಆಯ್ಕೆಯಾಗಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ವಿಜಯಪುರ ಕೃಷಿ ಮಹಾವಿದ್ಯಾಲಯದಿಂದ ಆಯ್ಕೆಯಾಗಿರುವುದು ವಿಶೇಷ.

ಈ ವಿದ್ಯಾರ್ಥಿಗಳು ತಮ್ಮ ವಿದೇಶ ಪ್ರವಾಸದ ಅವಧಿಯಲ್ಲಿ ಅಲ್ಲಿರುವ ಕೃಷಿ ಸಂಬಂಧಿ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿರುವ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ತರಬೇತಿ ಅವಧಿಯಲ್ಲಿ ಉಧ್ಯಮಶೀಲತೆ, ವ್ಯಕ್ತಿತ್ವ ವಿಕಸನ, ಮೃದು ಕೌಶಲ್ಯಗಳು, ವಿವಿಧ ಸ್ಟಾರ್ಟಪ್ ಮತ್ತು ಕೃಷಿಯಲ್ಲಿ ನೂತನ ತಂತ್ರಜ್ಞಾನ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುವರು ಎಂದು ಪ್ರಭಾರ ವಿದ್ಯಾಧಿಕಾರಿ ಡಾ. ಶ್ರೀಶೈಲ ಗೋಟ್ಯಾಳ, ಐಡಿಪಿ ಯೋಜನೆಯ ಮುಖ್ಯಸ್ಥ ಡಾ. ಎಸ್.ಬಿ. ಪಾಟೀಲ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ವಿದ್ಯಾರ್ಥಿ ಮುಖ್ಯ ಸಲಹೆಗಾರ ಡಾ. ಮಹಾಂತೇಶ ತೆಗ್ಗಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net