ಕೆನರಾ ಬ್ಯಾಂಕ್ ಶಾಖೆ ವಿಲೀನಕ್ಕೆ ವಿರೋಧ

Opposition to Canara Bank branch merger
ಗೊಳಸಂಗಿ ಸಮೀಪದ ವಂದಾಲ ಕೆನರಾ ಬ್ಯಾಂಕ್ ಶಾಖೆಯನ್ನು ಗೊಳಸಂಗಿ ಶಾಖೆಯೊಂದಿಗೆ ವಿಲೀನ ವಿರೋಧಿಸಿ ವಂದಾಲ ಗ್ರಾಮಸ್ಥರು ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿದರು. ಪ್ರಮೋದ ಕುಲಕರ್ಣಿ, ಶೇಖರ ಗೂಗಿಹಾಳ, ಬಿ.ಸಿ. ಸಜ್ಜನ, ಅಮರೇಶ ಹೆಬ್ಬಾಳ, ಸಿ.ವಿ. ಖೇಡದ ಇತರರಿದ್ದರು.
Published on

ಗೊಳಸಂಗಿ: ಸಮೀಪದ ವಂದಾಲ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಗೊಳಸಂಗಿ ಶಾಖೆಯೊಂದಿಗೆ ವಿಲೀನ ಮಾಡುವುದನ್ನು ವಿರೋಧಿಸಿ ವಂದಾಲ ಗ್ರಾಮಸ್ಥರು ಬ್ಯಾಂಕ್ ಎದುರು ಆರಂಭಿಸಿದ್ದ ಅಹೋರಾತ್ರಿ ಧರಣಿ ಆರಂಭದ ದಿನವೇ ಅಂತ್ಯ ಕಂಡಿತು.

ವಂದಾಲ ಗ್ರಾಮದಲ್ಲಿ 1988ರಿಂದಲೂ ಏಕೈಕ ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ ಅದು ಕೆನರಾ ಬ್ಯಾಂಕ್ ಆಗಿ ಪರಿವರ್ತನಗೊಂಡ ಕೆಲ ತಿಂಗಳಲ್ಲೇ ಗೊಳಸಂಗಿ ಶಾಖೆಯೊಂದಿಗೆ ವಿಲೀನ ಮಾಡುವ ಚರ್ಚೆ ಮುನ್ನೆಲೆಗೆ ಬಂದಾಗ ಗ್ರಾಮಸ್ಥರು ವಿರೋಧಿಸಿದ್ದರು.

ಬುಧವಾರ ಏಕಾಏಕಿಯಾಗಿ ಸೆ. 7ರ ನಂತರ ವಂದಾಲ ಶಾಖೆಯನ್ನು ಗೊಳಸಂಗಿ ಶಾಖೆಯೊಂದಿಗೆ ವಿಲೀನ ಮಾಡುವುದಾಗಿ ನೋಟಿಸ್ ಅಂಟಿಸಿದ್ದನ್ನು ಗಮನಿಸಿದ ಗ್ರಾಮಸ್ಥರು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದರು.

ಧರಣಿ ನಿರತರನ್ನುದ್ದೇಶಿಸಿ ತಾಪಂ ಮಾಜಿ ಸದಸ್ಯ ಪ್ರಮೋದ ಕುಲಕರ್ಣಿ, ಶೇಖರ ಗೂಗಿಹಾಳ, ಬಿ.ಸಿ. ಸಜ್ಜನ, ಅಮರೇಶ ಹೆಬ್ಬಾಳ ಮಾತನಾಡಿ, ವಂದಾಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ 14 ಹಳ್ಳಿಗರ ಕೃಷಿ, ವ್ಯಾಪಾರ ಮತ್ತಿತರ ಚಟುವಟಿಕೆಗಳಿಗೆ ಕೆನರಾ ಬ್ಯಾಂಕ್ ಆಧಾರಸ್ಥಂಭವಾಗಿದೆ. ಈಗ ಏಕಾಏಕಿ ಮುಳುಗಡೆಯ ನೆಪದಲ್ಲಿ ವಿಲೀನ ಮಾಡಿದರೆ ಹೇಗೆ.? ಮುಳುಗಡೆಯ ಹೆಸರಲ್ಲಿ ಎಲ್ಲ ಸೌಲಭ್ಯಗಳಿಂದ ವಂಚಿತಗೊಂಡು ಸಾಯಲಾಗದೇ ಬದುಕಿದ್ದೇವೆ. ಈಗ ಮತ್ತೆ ಬ್ಯಾಂಕ್ ವರ್ಗಾವಣೆಯಿಂದ ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಆಕ್ರೋಶವ್ಯಕ್ತಪಡಿಸಿದರು.

ಸೆ. 2ರಂದು ಆಲಮಟ್ಟಿಯ ಲಾಲ ಬಹಾದೂರ ಶಾಸ್ತ್ರಿ ಸಾಗರಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ಯಾವುದೇ ಧರಣಿ, ಪ್ರತಿಭಟನೆಗೆ ಅನುಮತಿ ನೀಡುವುದಿಲ್ಲ ಎಂದು ನಿಡಗುಂದಿ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶಿವಾನಂದ ಲಮಾಣಿ ಎಚ್ಚರಿಕೆ ನೀಡಿದರು. ಹೀಗಾಗಿ ಗ್ರಾಮಸ್ಥರು ಕೆನರಾ ಬ್ಯಾಂಕ್ ವಂದಾಲ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಧರಣಿಯಲ್ಲಿ ಸಿ.ವಿ. ಖೇಡದ, ನಾಗಪ್ಪ ಬಾವಿಕಟ್ಟಿ, ಪಾಂಡು ಪತಂಗೆ, ಮಂಜು ಜಾಲಿಮಿಂಚಿ, ತಿಪ್ಪಣ್ಣ ಮಾದರ, ಗುರುಸಂಗಯ್ಯ ಚಿಕ್ಕಮಠ, ಕಾಶೀಮಸಾಬ ಹಣಗಿ, ಸಂತೋಷ ತಳಗೇರಿ, ಲಕ್ಷ್ಮಣ ದೊಡಮನಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net