ವೇಣೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ :ಸತತ 3ನೇ ಅವಧಿಗೆ ಉದ್ಯಮಿ ಸುಂದರ ಹೆಗ್ಡೆ ಅಧ್ಯಕ್ಷ, ರತ್ನಾಕರ ಪೂಜಾರಿ ಉಪಾಧ್ಯಕ್ಷ

New Project (23)
Published on

ಬೆಳ್ತಂಗಡಿ: ತಾಲೂಕಿನ 8 ಗ್ರಾಮಗಳನ್ನು ಒಳಗೊಂಡ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಮೂರನೇ ಬಾರಿ ಅಧ್ಯಕ್ಷರಾಗಿ ಸಂಘಟಕ, ಉದ್ಯಮಿ ಸುಂದರ್ ಹೆಗ್ಡೆ ಬಿ.ಇ. ಹಾಗೂ ಉಪಾಧ್ಯಕ್ಷರಾಗಿ ಬಿ.ರತ್ನಾಕರ ಪೂಜಾರಿ ಬರ್ಕಜೆ ಅವಿರೋಧ ಆಯ್ಕೆಯಾದರು.

ವೇಣೂರು, ಮೂಡುಕೋಡಿ, ಕರಿಮಣೇಲು, ನಿಟ್ಟಡೆ, ಕುಕ್ಕೇಡಿ, ಅಂಡಿಂಜೆ, ಬಜಿರೆ ಹಾಗೂ ಗುಂಡೂರಿ ಗ್ರಾಮಗಳ ವ್ಯಾಪ್ತಿಗೆ ಒಳಗೊಂಡಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ರಿಂದ 2029-30ರವರೆಗಿನ ಅವಧಿಗೆ ಜ.12ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ನಿರ್ದೇಶಕರಾದ ರಾಮದಾಸ ನಾಯಕ್, ಸಂದೀಪ್ ಹೆಗ್ಡೆ, ಸಂತೋಷ್ ಜೈನ್, ಪ್ರವೀಣ್ ಪರಿಯೊಟ್ಟು, ಪ್ರಶಾಂತ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರಾಜು ನಾಯ್ಕ, ನಾಗಪ್ಪ, ಆಶಾ ಸುಂದರ ಹಾಗೂ ರೋಹಿನಿ ಪ್ರಕಾಶ್ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಪ್ರತಿಮಾ ಬಿ. ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಬ್ಯಾಂಕಿನ ಸಿಬ್ಬಂದಿ ಸಹಕರಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಪರಿಶ್ರಮ

ಶಾಸಕ ಹರೀಶ್ ಪೂಂಜ ಅವರ ಅವಿರತ ಶ್ರಮದ ಫಲವಾಗಿ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಅಣೆಕಟ್ಟು ನಿರ್ಮಾಣ, ನದಿ ದಂಡೆ, ಕೆರೆ ಅಭಿವೃದ್ಧಿಯೊಂದಿಗೆ ಅಂತರ್ಜಲ ಪ್ರಮಾಣ ಹೆಚ್ಚಿಸಿರುವುದು ಉಲ್ಲೇಖನೀಯ. ಉತ್ತಮ ಕೃಷಿಕರು, ಹಿರಿಯ ಸದಸ್ಯರಿಗೆ, ಸಾಧಕರಿಗೆ ಗೌರವಾರ್ಪಣೆ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಶೇ.3 ಬಡ್ಡಿದರದಲ್ಲಿ ಲಕ್ಷದ ವರೆಗೆ ಸಾಲ, ವಿದ್ಯಾಕೇಂದ್ರಗಳಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಆರೋಗ್ಯ ತಪಾಸಣಾ ಶಿಬಿರ, ಧಾರ್ಮಿಕ ಕ್ಷೇತ್ರಗಳಿಗೆ ಸಹಿತ ಅಶಕ್ತರಿಗೆ ನೆರವು ನೀಡಿದೆ. ಕೃಷಿ ಮಾಹಿತಿ ಶಿಬಿರ ಸವಲತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದು, ಪ್ರಸಕ್ತ ವರ್ಷದಲ್ಲಿ 100 ಮಂದಿ ಭತ್ತದ ಕೃಷಿಕರಿಗೆ ಪ್ರೋತ್ಸಾಹಧನ ನೀಡಲಾಗಿದೆ.

ಪಾರದರ್ಶಕ ಸೇವೆಯಿಂದ ಪ್ರಗತಿಪರ ಆಡಳಿತ

ಕಳೆದ ನಾಲ್ಕು ವರ್ಷಗಳಿಂದ ನಿರ್ದೇಶಕನಾಗಿ, ಸತತ 3ನೇ ಅವಧಿಗೆ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ನಮ್ಮ ಅವಧಿಯಲ್ಲಿ ಕಳೆದ 10 ವರ್ಷಗಳಲ್ಲಿ ಮಾಡಿದ ಕಾರ್ಯವೈಖರಿಗೆ ಸಾಧನೆಗಳಿಗಾಗಿ ಸತತ 7 ಬಾರಿ ‘ಉತ್ತಮ ಸಹಕಾರಿ ಸಂಘ’ ಎಂಬ ಪ್ರಶಸ್ತಿಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನೀಡಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಸಂಘದ ಸದಸ್ಯರಿಗೆ ಪ್ರತಿ ವರ್ಷ ಶೇ.20 ಡಿವಿಡೆಂಡ್ ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸಂಘದ ಗ್ರಾಮ ವ್ಯಾಪ್ತಿಯಲ್ಲಿ ಸಂಘದ ಶಾಖೆ ತೆರೆಯುವ ಚಿಂತನೆ ಇದೆ. ನೂತನ ಕಟ್ಟಡದಲ್ಲಿ ಎಟಿಎಂ ತೆರೆಯಲಾಗುತ್ತದೆ. ಸಂಘದ ಎಲ್ಲ ಸದಸ್ಯರಿಗೂ ಅರ್ಹ ಸೌಲಭ್ಯವನ್ನು ಕ್ಲಪ್ತ ಸಮಯದಲ್ಲಿ ದೊರಕಿಸಿ ಸ್ವಚ್ಛ, ದಕ್ಷ, ಕ್ಷಿಪ್ರ, ಪಾರದರ್ಶಕ ಸೇವೆ ಮೂಲಕ ಪ್ರಗತಿಪರ ಆಡಳಿತ ನಡೆಸಿ, ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net