

*ನೀರಿನಲ್ಲಿ ಕೊಳೆತು ಕಪ್ಪಾದ ರಾಗಿ ಪೈರು
*ನಷ್ಟದ ಭೀತಿಯಲ್ಲಿ ಅನ್ನದಾತರು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಕಷ್ಟಪಟ್ಟು ಬೆಳೆದ ರಾಗಿ ಸಲು ಕೈಗೆ ಬರುವಷ್ಟರಲ್ಲಿ ಕೊಯ್ಲು ಮಾಡಿ ಹಾಕಿದ ಸ್ಥಳದಲ್ಲೇ ಮೊಳಕೆಯೊಡೆಯುತ್ತಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಸರ್ಕಾರ ರೈತರಿಗೆ ಆರ್ಥಿಕ ನಷ್ಟ ತುಂಬಿಕೊಡಬೇಕು ಎಂಬ ಆಗ್ರಹ ರೈತರಿಂದ ಕೇಳಿಬರುತ್ತಿದೆ.
ಜಿಲ್ಲೆಯಲ್ಲಿ 15 ದಿನಗಳಿಂದ ರಾಗಿ ಕೊಯ್ಲು ಪ್ರಾರಂಭವಾಗಿದೆ. ಫೆಂಗಲ್ ಚಂಡಮಾರುತ ಪರಿಣಾಮ ಕಳೆದ ವಾರ 3 ದಿನ ಸುರಿದ ಮಳೆಗೆ ಕೊಯ್ಲು ಮಾಡಿದ ಹೊಲದಲ್ಲಿ ನೀರುನಿಂತು ರಾಗಿ ಫೈರು ಕೊಳೆತಿದೆ. ರೈತರ ಹೊಲಗಳಲ್ಲಿ ರಾಗಿ ಮೊಳಕೆ ಒಡೆಯುತ್ತಿದ್ದು, ರಾಗಿ ಸಲು ಕೈಗೆ ಸಿಗದೆ ರೈತರು ನಷ್ಟ ಹೊಂದುವಂತಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸನ್ನಿವೇಶ ನಿರ್ಮಾಣವಾಗಿದೆ.
ರಾಮನಗರ ಜಿಲ್ಲೆ ಬಹುಪಾಲು ಮಳೆಯಾಶ್ರಿತ ಪ್ರದೇಶವಾಗಿದೆ. ಅರ್ಕಾವತಿ, ವೃಷ‘ಭಾವತಿ, ಕಣ್ವ ನದಿ, ಇಗ್ಗಲೂರು ಬ್ಯಾರೇಜ್ ಅಕ್ಕಪಕ್ಕದ ಪ್ರದೇಶ, ಹಲವು ದೊಡ್ಡದೊಡ್ಡ ಕೆರೆಗಳ ತೀರದ ಕೆಲವು ಗ್ರಾಮಗಳ ರೈತರು, ನೀರಾವರಿ ಸೌಲಭ್ಯಯದಿಂದ ಭತ್ತದ ಬೆಳೆಯಲ್ಲಿ ತೊಡಗಿದ್ದಾರೆ. ಉಳಿದ ಪ್ರದೇಶ ಬೆಟ್ಟ, ಗುಡ್ಡ ಸೇರಿ ಬಯಲು ಪ್ರದೇಶವಾಗಿದ್ದು, ರೈತರು ಪ್ರತಿವರ್ಷ ಮುಂಗಾರಿನಲ್ಲಿ ಮಳೆಯಾಶ್ರಿತ ರಾಗಿ ಬೆಳೆ ಅವಲಂಬಿಸಿದ್ದಾರೆ.
ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲ, ಕೂಟಗಲ್, ಎರೇಹಳ್ಳಿ, ದೊಡ್ಡಗಂಗವಾಡಿ, ಅಕ್ಕೂರು ಕಸಬಾ ಹೋಬಳಿಯ ಕೊತ್ತೀಪುರ, ಹಾಗಲಹಳ್ಳಿ, ಸುಗ್ಗನಹಳ್ಳಿ, ಕೈಲಾಂಚ ಹೋಬಳಿಯ ಅಂಜನಾಪುರ, ಬನ್ನಿಕುಪ್ಪೆ, ಲಕ್ಕೋಜನಹಳ್ಳಿ, ವಿಭೂತಿಕೆರೆ, ಅಂಕನಹಳ್ಳಿ, ಹುಲಿಕೆರೆ, ಗುನ್ನೂರು ಸೇರಿ ಹಲವು ಗ್ರಾಮಗಳಲ್ಲಿ ರಾಗಿ ಸಲು ನೆಲಕಚ್ಚಿದೆ.
ರಾಗಿ ವಿಸ್ತೀರ್ಣ: ಕೃಷಿ ಇಲಾಖೆ ಅಂದಾಜಿನ ಪ್ರಕಾರ ಜಿಲ್ಲೆಯಲ್ಲ್ಲಿ ಒಟ್ಟು 70 ಸಾವಿರ ಹೆಕ್ಟೇರ್‌ನಲ್ಲಿ ರಾಮನಗರ 6,460, ಚನ್ನಪಟ್ಟಣ 4,788, ಮಾಗಡಿ 33,500, ಕನಕಪುರ 17,785, ಹಾರೋಹಳ್ಳಿ 7,580 ಹೆಕ್ಟೇರ್ ವಿಸ್ತೀರ್ಣದಲ್ಲಿ ತಾಲೂಕುಗಳಲ್ಲಿ 90 ದಿನಗಳಲ್ಲಿ ಬರುವ ಎಂ.ಎಲ್.365-ಮಧ್ಯಮಾವಧಿ ತಳಿ, ಜಿಪಿ 28-ಅಲ್ಪಾವಧಿ ತಳಿ, 115-120 ದಿನಗಳಲ್ಲಿ ಬರುವ ಎಂ.ಆರ್.6, ಎಂ.ಆರ್.1 ತಳಿಯ ರಾಗಿ ಬಿತ್ತನೆ ಮಾಡಲಾಗಿದೆ.
ಮುಂಗಾರು ಆರಂ‘ದಲ್ಲಿ ಒಂದಷ್ಟು ದಿನ ಮಳೆ ಕೈಕೊಟ್ಟಿತ್ತಾದರೂ ನಂತರದ ದಿನಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿ ಆದ್ದರಿಂದ ರೈತರು ಹರ್ಷಚಿತ್ತರಾಗಿ ರಾಗಿ ಹೊಲಗಳಲ್ಲಿ ನಳನಳಿಸುತ್ತಿದ್ದ ಹಸಿರು ರೈರು, ತೆನೆಗಳ ರಾಶಿ ರಾಶಿ ಕಂಡು ಭರ್ಜರಿ ಫಸಲು ಕೈ ಸೇರುತ್ತದೆ ಎಂದು ಹಿರಿ ಹಿರಿ ಹಿಗ್ಗಿದ್ದರು. ಆದರೆ ಫೆಂಗಲ್ ಚಂಡಮಾರುತ ರೈತರನ್ನು ಚಿಂತಿತರಾಗುವಂತೆ ಮಾಡಿದೆ.
ಕೊಯ್ಲು ಮಾಡಿ ಹಾಕಿರುವ ರಾಗಿ ತೆನೆಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ತೇವಾಂಶದಿಂದ ಮೊಳಕೆ ಬರುತ್ತಿವೆ. ಬಿಸಿಲು ಬಂದರೂ ಮೂರು ದಿನ ಸತತ ಮಳೆ ಬಿದ್ದು, ಹೊಲದಲ್ಲಿ ನೀರು ನಿಂತ ಪರಿಣಾಮ ನಷ್ಟ ಎದುರಾಗಿದೆ. ರೈತರು ಕೊಯ್ಲು ಮಾಡಿದ ರಾಗಿ ಉಳಿಸಿಕೊಳ್ಳಲು ಪೈರನ್ನು ನೆಲದಿಂದ ಸಾಲು ಸಾಲಿಗೆ ನಿಲ್ಲಿಸಿ, ಮೊಳಕೆ ಬರುವುದನ್ನು ತಪ್ಪಿಸಲು ಕಸರತ್ತು ನಡೆಸುವಂತಾಗಿದೆ.
ಕಪ್ಪಾದ ರಾಗಿ ಫೈರು ಕೊಯ್ಲು ಮಾಡಿ ಭೂಮಿಯಲ್ಲಿ ಒಣಗಲು ಹರಡಿರುವ ರಾಗಿ ಪೈರು, ಮಳೆಯಿಂದ ನೆನೆದು ಭೂಮಿಯ ತೇವಾಂಶದಿಂದ ಕೊಳೆತಿರುವ ಕಾರಣ ಕಪ್ಪುಬಣ್ಣಕ್ಕೆ ತಿರುಗಿದೆ. ಜಾನುವಾರು ಮೇವೂ ಸಿಗದಂತಾಗಿದೆ.
ಸುಗ್ಗನಹಳ್ಳಿ, ಚಕ್ಕೆರೆದೊಡ್ಡಿ, ಚನ್ನಮಾನಹಳ್ಳಿ ಭಾಗಗಳಲ್ಲಿ ಕೆಲವು ರೈತರು ಭತ್ತದ ಕೊಯ್ಲು ಮಾಡಿದ್ದರು. ಮಳೆಗೆ ಗದ್ದೆಗಳಲ್ಲಿ ನೀರು ತುಂಬಿ ಭತ್ತವೂ ಹಾಳಾಗಿದ್ದು, ಹುಲ್ಲು ಕೊಳೆತು ಉಪಯೋಗಕ್ಕೆ ಬಾರದಂತಾಗಿದೆ.
ಹಿಂಗಾರು ಮಳೆ ವರವಾಗಿ ಉತ್ತಮ ಸಲು ಕೈಬೀಸಿ ಕರೆದಂತಿತ್ತು. ಚಂಡಮಾರುತ ಪ್ರಭಾವದಿಂದ ಆದ ಮಳೆ ರೈತರನ್ನು ನಷ್ಟದತ್ತ ದೂಡಿದೆ. ಕೂಡಲೇ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು.ಮಹದೇವಸ್ವಾಮಿ, ವಿಭೂತಿಕೆರೆ
==
ನಷ್ಟವಾಗಿರುವ ರಾಗಿ ಬೆಳೆ ಸಮೀಕ್ಷೆಯನ್ನು ಕಂದಾಯ ಮತ್ತು ಕೃಷಿ ಇಲಾಖೆಗಳು ಜಂಟಿಯಾಗಿ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಈಗಾಗಲೇ ಸಮೀಕ್ಷೆ ಪ್ರಾರಂಭವಾಗಿದ್ದು, ಬೆಳೆ ನಷ್ಟವಾಗಿರುವ ರೈತರು ಕೃಷಿ ಇಲಾಖೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ತೇಜಸ್ವಿನಿ, ತಹಸೀಲ್ದಾರ್, ರಾಮನಗರ ತಾಲೂಕುರಾಮನಗರ ತಾಲೂಕಿನ ಕೂಟಗಲ್, ಕಸಬಾ, ಕೈಲಾಂಚ ಹೋಬಳಿಯ ಹಲವು ಗ್ರಾಮಗಳಲ್ಲಿ ರಾಗಿ, ಭತ್ತ, ಟೊಮ್ಯಾಟೊ ಬೆಳೆ ನಷ್ಟ ಉಂಟಾಗಿದೆ ಎಂದು ರೈತರು ಅರ್ಜಿ ನೀಡುತ್ತಿದ್ದಾರೆ. ವಿಮೆ ಮಾಡಿಸಿರುವ ರೈತರ ಫಸಲು ನಷ್ಟಕ್ಕೆ ವಿಮಾ ಕಂಪನಿ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದೆ. ವಿಮೆ ಇಲ್ಲದ ರೈತರ ಫಸಲು ನಷ್ಟಕ್ಕೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಎಚ್.ಆರ್.ಪ್ರಮೋದ್ ಕುಮಾರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ