

ಹೊಸಪೇಟೆ: ಪಕ್ಷ ಸಂಘಟನೆ ಮತ್ತು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೆ.1ರಿಂದ ಮತದಾರ ಚೇತನ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡಲ ಮತ್ತು ಬೂತ್ ಮಟ್ಟದಲ್ಲಿ ಅಭಿಯಾನಕ್ಕೆ ಶೀಘ್ರ ಚಾಲನೆ ನೀಡಲಾಗುವುದು. 18 ವರ್ಷದ ಪೂರೈಸಿದ ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಪ್ರತಿ ಬೂತ್‌ಗೆ ಇಬ್ಬರು ಬಿಎಲ್‌ಎ ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಬಿಎಲ್‌ಎ ನೇಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮೂವರ ನೇತೃತ್ವದಲ್ಲಿ ತಂಡ ರಚಿಸಲಿದ್ದು, ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಚಿವ ಆನಂದ್ ಸಿಂಗ್ ಮತ್ತು ನಾನು ತಂಡದಲ್ಲಿರಲಿದ್ದೇವೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಯಿಂದ ಮತದಾರ ಚೇತನ ಅಭಿಯಾನ
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಜನರ ತಂಡ ಇರಲಿದ್ದು, ಶಾಸಕರು, ಪಕ್ಷದ ಅಭ್ಯರ್ಥಿಗಳು ನೇತೃತ್ವದಲ್ಲಿ ಅಭಿಯಾನ ನಡೆಯಲಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಗಾರ ಮತ್ತು ಕಾರ್ಯಕರ್ತರಿಗೆ ತರಬೇತಿ ಆಯೋಜಿಸಲಾಗುವುದು.
ಕಾಲೇಜು, ಹಾಸ್ಟೆಲ್‌ಗೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹೊಸ ಮತದಾರರ ಸೇರ್ಪಡೆ, ನಕಲಿ ಮತದಾರರ ಹೆಸರು ಕೈಬಿಡುವ ನಿಟ್ಟಿನಲ್ಲಿ ಅಭಿಯಾನದ ಮೂಲಕ ಚುನಾವಣಾ ಆಯೋಗದ ಮೇಲೆ ಒತ್ತಡ ತರಲಾಗುತ್ತದೆ ಎಂದು ತಿಳಿಸಿದರು. ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ರಾಘವೇಂದ್ರ, ಸತ್ಯನಾರಾಯಣ ಇದ್ದರು.