ರಾಜ್ಯದಲ್ಲಿ ಬಿಜೆಪಿಯಿಂದ ಮತದಾರ ಚೇತನ ಅಭಿಯಾನ

Shobha karndlaje
Published on

ಬೆಂಗಳೂರು: ಹೊಸದಾಗಿ ಮತದಾನದ ಹಕ್ಕು ಪಡೆದವರಲ್ಲಿ ಜಾಗೃತಿ ಮೂಡಿಸಿ ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆಗೆ ರಾಜ್ಯದಲ್ಲಿ ಸೆ.1 ರಿಂದ 10ರವರೆಗೆ ' ನನ್ನ ದೇಶ- ನನ್ನ ಮತ' ಘೋಷವಾಕ್ಯದಡಿ ಮತದಾರ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಜಾಜೆ ತಿಳಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಪೂರಕವಾಗಿ ಪಕ್ಷ ಕೆಲಸ ಮಾಡಲಿದೆ. ಅಭಿಯಾನ ನಿರ್ವಹಣೆಗೆ ರಾಜ್ಯಮಟ್ಟದಲ್ಲಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಮಿತಿ ರಚಿಸಲಿದ್ದು, ಶಾಸಕ ಅರವಿಂದ ಬೆಲ್ಲದ್, ಪಿರಾಜೀವ್, ವಿವೇಕ್ ರೆಡ್ಡಿ, ಲೋಕೇಶ್ ಇರಲಿದ್ದಾರೆ. ಇದೇ ರೀತಿ ಜಿಲ್ಲಾ ತಂಡಗಳನ್ನು ನೇಮಿಸಲಾಗುವುದು ಎಂದರು.

ಪ್ರತಿ ಗ್ರಾಮಕ್ಕೆ ಬಿಎಲ್‌ಎ 2ಗಳನ್ನು ಸದ್ಯದಲ್ಲೇ ನೇಮಕ ಮಾಡಲಿದ್ದೇವೆ. ಅವರಿಗೆ ಅಗತ್ಯ ಕಾರ್ಯಾಗಾರ ಏರ್ಪಡಿಸಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆದು ಹಾಕುವ ವಿಧಾನದ ಬಗ್ಗೆ ಮಾಹಿತಿ ನೀಡಿ ಸಜ್ಜುಗೊಳಿಸಲಿದ್ದು, ಜನರ ಸಹಕಾರ ಅಗತ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸೆ.17ರಂದು ಮನೆ ಮನೆಗೆ ಅಭಿಯಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಲು ದೇಶದ ಎಲ್ಲರೂ ಮತದಾನ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ವಿಶ್ವದ ಬಯಕೆ

ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ. ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ. ಅಂತಹ ಪ್ರಧಾನಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಚುನಾವಣಾ ಆಯೋಗ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಮತದಾರರ ಯಾದಿಯಲ್ಲಿ ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಲು ಅಭಿಯಾನದ ಮೂಲಕ ಮನವಿ ಮಾಡಲಾಗುವುದು ಎಂದರು.

ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಹಿತಿ ಇರುವುದಿಲ್ಲ. ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್. ನಕಲಿ ಮತದಾರರ ಗುರುತಿಸುವ. ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಈ ಹಿಂದೆ ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಮತದಾರರ ಹೆಸರನ್ನು ಕೈಬಿಡುವ ಕೆಲಸವೂ ನಡೆದಿತ್ತು. ಜಾತಿ ನೋಡಿ, ಹೆಸರು ನೋಡಿ ಹೆಸರು ತೆಗೆಯಲಾಗಿತ್ತು. ಸರಿಯಾದ ಮತದಾರರ ಪಟ್ಟಿ ತಯಾರಿಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದ್ದು, ಬಿಜೆಪಿ ನೆರವಾಗಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net