

ಕೆ.ಆರ್.ಸಾಗರ: ಭೋರ್ಗರೆಯುತ್ತಿದ್ದ ವರುಣ ನಾಲೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಕೆ.ಆರ್.ಸಾಗರ ಗ್ರಾಮದ ಕೇರಳಾಪುರ ಮಿಲ್ಟ್ರಿ ಹೋಟೆಲ್ ಕೆಲಸಗಾರ ರಾಘವೇಂದ್ರನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದರು.
ಕಳೆದ ಆಗಸ್ಟ್ 10ರಂದು ಬೆಳಗ್ಗೆ ತುಂಬಿ ಹರಿಯುತ್ತಿದ್ದ ವರುಣ ನಾಲೆಯಲ್ಲಿ ರಾಘವೇಂದ್ರ ಸ್ನೇಹಿತರ ಜತೆ ಈಜಲು ಹೋಗಿ ಕಣ್ಮರೆಯಾಗಿದ್ದ. ಕೆ.ಆರ್.ಸಾಗರ ಸಿಪಿಐ ಪುನೀತ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಕುರಿತು ರಾಘವೇಂದ್ರ ಪಾಲಕರು ಪೊಲೀಸರ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಇದೀಗ ಶ್ರೀರಂಗಪಟ್ಟಣ ಸಿಪಿಐ ಪ್ರಕಾಶ್ ನೇತೃತ್ವದಲ್ಲಿ ಮತ್ತೆ ಶೋಧ ಕಾರ್ಯ ನಡೆಸಲಾಗಿದೆ.
ಸುಮಾರು 150 ದಿನಗಳ ನಂತರ ನಾಲೆಯಲ್ಲಿ ನೀರು ಕಡಿಮೆಯಾಗಿದ್ದು, ನಾಲೆ ಹಾಗೂ ಉಪನಾಲೆ ಸೇರಿದಂತೆ 100 ಕಿ.ಮೀ. ಉದ್ದ ಇರುವ ವರುಣ ನಾಲೆಯಲ್ಲಿ ಖುದ್ದು ಅಧಿಕಾರಿಗಳು 8 ಪೊಲೀಸ್ ತಂಡಗಳನ್ನು ರಚನೆ ಮಾಡಿ ಗುರುವಾರದಿಂದ ಶೋಧ ಕಾರ್ಯ ಆರಂಭಿಸಲಾಗಿದೆ. ಸಿಪಿಐ ಪ್ರಕಾಶ್ ಮತ್ತು ಪಿಎಸೈ ರಮೇಶ್ ಕರ್ಕಿಕಟ್ಟೆ ನೇತೃತ್ವದಲ್ಲಿ ಸುಮಾರು 40 ಕಿ.ಮೀ. ತನಕ ಶುಕ್ರವಾರ ಸಂಜೆ ತನಕ ಹುಡುಕಾಟ ನಡೆಸಿದ್ದು, ನಾಲೆಯ ಕೊನೇ ಭಾಗದ ತನಕ ನಿರಂತರವಾಗಿ ಹುಡುಕಾಟ ನಡೆಸಲಿದ್ದಾರೆ.
ಈತನ ಚಹರೆ 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾನೆ. ಈತನ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ: 9480804856 ಸಂಪರ್ಕಿಸಲು ಕೋರಲಾಗಿದೆ.