

* ಬೆಂಗಳೂರು ಸುತ್ತಮುತ್ತ ಆರು ಕಡೆ ಗುರುತು
* ಹಾರೋಹಳ್ಳಿಯಲ್ಲಿ ಬಹುತೇಕ ಖಚಿತ
ಚೌಕಸಂದ್ರ ಜಯರಾಮ ನಾಯಕ್ ಹಾರೋಹಳ್ಳಿ
ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದೆಡೆ ಅಂತಾರಾಷ್ಟ್ರೀಯಮಟ್ಟದ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 6 ಕಡೆ ಜಾಗದ ಶೋಧ ಮಾಡಲಾಗಿದ್ದು, ಈ ಪೈಕಿ ಹಾರೋಹಳ್ಳಿ ತಾಲೂಕೂ ಸೇರಿದೆ.
ಬೆಂಗಳೂರಿಗೆ ಹೊಂದಿಕೊಂಡಂತೆ ತಮಿಳುನಾಡಿನ ಗಡಿಭಾಗದ ಹೊಸೂರು ಬಳಿ ತಮಿಳುನಾಡು ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಮುಂದಾಗಿದೆ. ಅಂತೆಯೇ, ಕರ್ನಾಟಕ ಸರ್ಕಾರ ಬೆಂಗಳೂರಿನ ಸುತ್ತಮುತ್ತ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಗುರುತು ಮಾಡಿದೆ.
ದಾಬಸ್ಪೇಟೆ ಬಳಿ ಒಂದು, ನೆಲಮಂಗಲ ಸುತ್ತಮುತ್ತ ಮೂರು ಕಡೆ, ಮಾಗಡಿ ತಾಲೂಕಿನಲ್ಲಿ ಒಂದು ಕಡೆ, ದೊಡ್ಡಬಳ್ಳಾಪುರ ಬಳಿ ಒಂದು ಕಡೆ ಹಾಗೂ ಹಾರೋಹಳ್ಳಿ ತಾಲೂಕಿನಲ್ಲಿ ಒಂದು ಕಡೆ ಜಾಗ ಗುರುತಿಸಲಾಗಿದೆ. ಒಟ್ಟು ಆರು ಕಡೆ ಭೂಮಿ ಗುರುತಿಸಿದ್ದು, ಎಲ್ಲ ಕಡೆ ಸರಿ ಸುಮಾರು 5000 ಎಕರೆ ಭೂಮಿ ಗುರುತು ಮಾಡಲಾಗಿದೆ ಎನ್ನಲಾಗಿದೆ.
ಹಾರೋಹಳ್ಳಿ ತಾಲೂಕು ಬೆಂಗಳೂರು ನಗರಕ್ಕೆ ಹತ್ತಿರವಿರುವುದರಿಂದ ಜತೆಗೆ ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಶರವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಈಗಾಗಲೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಮೂರನೇ ಮತ್ತು ನಾಲ್ಕನೇ ಹಂತದ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಈ ಭಾಗದಲ್ಲಿ ವಿಮಾನ ನಿಲ್ದಾಣ ಮಾಡಲು ಜಾಗವನ್ನು ಗುರುತಿಸಲಾಗುತ್ತಿದ್ದು, ಮುಂದೆ ಈ ಭಾಗದ ಭೂಮಿಗೆ ಬಂಗಾರ ಬೆಲೆ ಬರುವುದು ನಿಶ್ಚಿತ ಎನ್ನಲಾಗಿದೆ.
ಬೆಂಗಳೂರು- ಮೈಸೂರು ರಸ್ತೆಯಿಂದ ಸುಮಾರು 17 ಕಿಮೀ ದೂರ ಹಾಗೂ ಬೆಂಗಳೂರು ನೈಸ್ ರಸ್ತೆಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಹಾರೋಹಳ್ಳಿ ಪಟ್ಟಣದ ವಡೇರಹಳ್ಳಿ ಹಾಗೂ ಸುತ್ತಮುತ್ತಲೂ ಭೂಮಿ ಗುರುತಿಸಲಾಗಿದೆ. ಸುತ್ತಮುತ್ತಲಿನ ಪರಿಸರ ಹಾಗೂ ಮೂಲ ಸೌಲಭ್ಯದ ಜತೆಗೆ ಜನರಿಗೆ ಹತ್ತಿರವಾಗುವ ಸ್ಥಳವನ್ನು ಸ್ಥಳ ಶೋಧ ಮಾಡಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯಲ್ಲಿಯೇ ವಿಮಾನ ನಿಲ್ದಾಣ ಸ್ಥಾಪನೆಗೆ ಪಣತೊಟ್ಟಿದ್ದು, ಅದರಲ್ಲಿಯೂ ಕನಕಪುರ, ಹಾರೋಹಳ್ಳಿ ಮುಖ್ಯ ರಸ್ತೆಯ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಹುಡುಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಛಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾರೋಹಳ್ಳಿ ತಾಲೂಕಿನಲ್ಲಿ ಸುಮಾರು 1800 ಎಕರೆಗೂ ಹೆಚ್ಚು ಗೋಮಾಳ ಜಮೀನಿದೆ. ಟಿ. ಹೊಸಳ್ಳಿ ಮತ್ತು ಬನವಾಸಿ ಗ್ರಾಪಂನ 12 ಗ್ರಾಮಗಳನ್ನು ಇದರಲ್ಲಿ ಸೇರಿಸಿಕೊಂಡಂತೆ ತಾಲೂಕಿನ ದಯಾನಂದ ಸಾಗರ್ ಆಸ್ಪತ್ರೆ ಹಾಗೂ ಜೈನ್ ಯೂನಿವರ್ಸಿಟಿಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ಮಾಡಲಾಗುವುದು ಎನ್ನಲಾಗಿದೆ. ಸರ್ಕಾರಿ ಗೋಮಾಳ ಜಾಗ ವಶಪಡಿಸಿಕೊಳ್ಳುವುದರಿಂದ ಯೋಜನಾ ವೆಚ್ಚ ಕಡಿಮೆಯಾಗಲಿದೆ. ಆದ್ದರಿಂದಲೇ ಹಾರೋಹಳ್ಳಿ ತಾಲೂಕಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಹುತೇಕ ಖಚಿತ ಎಂಬ ಮಾತುಗಳು ದಟ್ಟವಾಗಿವೆ.
ಹಾರೋಹಳ್ಳಿ ತಾಲೂಕಿನ ಸುತ್ತಮುತ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಹುಡುಕಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ನಿಖರ ಜಾಗ ಯಾವುದೆಂದು ಗೊತ್ತಾಗಿಲ್ಲ. > ಆರ್.ಸಿ. ಶಿವಕುಮಾರ್ಹಾರೋಹಳ್ಳಿ ತಹಸೀಲ್ದಾರ್ವಿಮಾನ ನಿಲ್ದಾಣ ಬಂದರೆ ಅಭಿವೃದ್ಧಿ ಶರ ವೇಗದಲ್ಲಿ ಆಗುತ್ತದೆ. ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತದೆ. ಜತೆಗೆ ನಮ್ಮ ತಾಲೂಕು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತದೆ.> ಜೆಸಿಬಿ ಅಶೋಕ್ಬ್ಲಾಕ್ ಕಾಂಗ್ರೆಸ್ ಅಧ್ಯ ಹಾರೋಹಳ್ಳಿ.