

ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಗುರುವಾರ ಸೀಲಿಂಗ್ ಫ್ಯಾನ್ ಕಳಚಿ ಬಿದ್ದಿದ್ದು ಅದು ಬಾಲಕಿಯೊಬ್ಬಳ ಮೇಲೆ ಬಿತ್ತು ಎಂಬ ಸುದ್ದಿ ಹರಿದಾಡಿ ಕೆಲಕಾಲ ಆಸ್ಪತ್ರೆ ಆವರಣದಲ್ಲಿ ಆತಂಕ ಸೃಷ್ಟಿಸಿತ್ತು.
ಆಸ್ಪತ್ರೆಯ ಒಳರೋಗಿಗಳ ಕೊಠಡಿಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರನ್ನು ನೋಡಲು ಆಗಮಿಸಿದ್ದ ತಾಲೂಕಿನ ಗುಡಾಣಕೆರೆ ಗ್ರಾಮದ ಐದು ವರ್ಷದ ಬಾಲಕಿ ರಶ್ಮಿ ಮೇಲೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಕಳಚಿಬಿದ್ದಿದೆ ಎಂಬ ಸುದ್ದಿ ಹರಿದಾಡಿದ್ದರಿಂದ ನೂರಾರು ಜನರು ಆಸ್ಪತ್ರೆಯೆಡೆಗೆ ದೌಡಾಯಿಸಿದರು. ಆದರೆ, ಬಾಲಕಿ ನಿಂತಿದ್ದ ಸಮೀಪವೇ ಫ್ಯಾನ್ ಕಳಚಿ ಬಿದ್ದಿದೆ. ಫ್ಯಾನ್ ಬಿದ್ದ ರಭಸಕ್ಕೆ ಬಾಲಕಿ ಸಹ ಕುಸಿದಿದ್ದು ರಕ್ಕೆಯ ಅಲ್ಪಭಾಗ ಬಾಲಕಿಯ ಕುತ್ತಿಗೆಗೆ ತಗುಲಿದೆ ಎಂದು ತಿಳಿದು ಬಂದಿದೆ. ಯಾವುದೇ ಗಾಯಗಳಿಲ್ಲದೆ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.