

ಕುಕನೂರು: ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರ ತವರೂರು ತಳಕಲ್ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಮದ ನಡುವೆ ಪಾಳುಬಿದ್ದ ಬಾವಿ, ಆಳದ ತಗ್ಗುಗಳು ಆಪಾಯವನ್ನು ಆಹ್ವಾನಿಸುವಂತಿವೆ.
ಇದನ್ನೂ ಓದಿ:ಪಾಳುಬಿದ್ದಿದ್ದ ಕೆರೆಗೆ ಮರುಜೀವ
ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಎದುರು 50 ಅಡಿ ಹಾಗೂ ಅರ್ಧ ಎಕರೆಗೂ ಹೆಚ್ಚಿರುವ ಬಾವಿ ಆಕಾರದ ತಗ್ಗಿನಲಿ ನೀರು ಸಂಗ್ರಹವಾಗಿ ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಸೊಳ್ಳಗಳ ಉಪಟಳ ಹೆಚ್ಚಾಗಿ ರೋಗ ಭೀತಿ ಎದುರಾಗಿದೆ. ತಗ್ಗಿನಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದಾರೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಈಗಾಗಲೇ ಗ್ರಾಮದ ಬೆಣ್ಣಿಗೇರಿ ಕಾಮಗಾರಿಯ ಮಣ್ಣಿನಿಂದ ಅರ್ಧ ತಗ್ಗು ಮುಚ್ಚಿದ್ದು, ಉಳಿದ ತಗ್ಗನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮದ ಅಂಗನವಾಡಿ ಕೇಂದ್ರದ ಹಿಂದೆ ಹಳೇ ಬಾವಿ ಇದ್ದು, ಇದರ ಸುತ್ತಲೂ ಜಾಲಿ, ಮುಳ್ಳಿನ ಗಿಡಗಳು ಬೆಳೆದು ನಿರ್ಜನ ಪ್ರದೇಶವಾಗಿದೆ. ಅಂಗನವಾಡಿ ಮಕ್ಕಳಿಗೆ ವಿಷ ಸರ್ಪಗಳ ಕಾಟ ಹೆಚ್ಚಾಗಿದೆ. ಇದನ್ನು ಸ್ವಚ್ಛಗೊಳಿಸಿ, ಬಳಕೆ ಇಲ್ಲದೆ ಪಾಳು ಬಿದ್ದ ಬಾವಿಗೆ ಗರಸು ತುಂಬಿದರೆ ಅಂಗನವಾಡಿ ಮಕ್ಕಳಿಗೆ ಅನುಕೂಲವಾಗಲಿದೆ. ಸರ್ಕಾರಿ ಡಿಗ್ರಿ ಕಾಲೇಜು ಆವರಣದ ಮಧ್ಯೆದಲ್ಲಿ ಬಾವಿ ಇದೆ. ನಿತ್ಯ ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಬಾವಿ ಮುಚ್ಚಲು ಮುಂದಾಗಿಲ್ಲ. ಬಾವಿ ಸುತ್ತ ರಕ್ಷಣಾ ಬೇಲಿ ಸಹ ಅಳವಡಿಸಿಲ್ಲ. ಅನಾಹುತಕ್ಕೂ ಮುಂಚೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಬಾವಿ ಮುಚ್ಚಬೇಕು. ಕೆರೆ ಹೂಳೆತ್ತುವ ಮಣ್ಣಿನಿಂದ ಗ್ರಾಮದ ತಗ್ಗು ಹಾಗೂ ಹಳೇ ಬಾವಿಗಳನ್ನು ಮುಚ್ಚಿದರೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.