ಪಾಳುಬಿದ್ದಿದ್ದ ಕೆರೆಗೆ ಮರುಜೀವ

blm-1
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಹಲವು ವರ್ಷಗಳ ಹಿಂದೆ ಸುತ್ತಮುತ್ತಲಿನ ನಾಲ್ಕೈದು ಗ್ರಾಮದ ಜನರಿಗೆ ನಿತ್ಯ ದಿನ ಬಳಕೆಯ ಸಹಿತ ಕುಡಿಯಲು ಹಾಗೂ ಕೃಷಿಗೆ ಉಪಯೋಗಕ್ಕೆ ಬರುತ್ತಿದ್ದ ನೀರಿನ ಮೂಲದ ಕೆರೆಯೊಂದು ಕಾಲಕ್ರಮೇಣ ಪಾಳು ಬಿದ್ದು ಕೆರೆಯೇ ಮರಿಚಿಕೆಯಾಗಿತ್ತು. ಇದೀಗ ಮತ್ತೆ ಜೀವ ಕಳೆದುಕೊಂಡ ಕೆರೆಯೊಂದಕ್ಕೆ ಮರು ಜೀವ ನೀಡುವ ಕಾರ್ಯ ಮಾಡಲಾಗಿದೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಅಮೃತನಗರದ ಕೆರೆಯ ಕಥೆ ಇದು. ಶತಮಾನಗಳ ಹಿಂದಿನ ಪುರಾತನ ಕೆರೆಯಾಗಿದ್ದು ಹಿಂದೆ ಪರಿಸರದ ಸುಮಾರು ಗ್ರಾಮಕ್ಕೆ ಉಪಯೋಗಕ್ಕೆ ಬರುತ್ತಿತ್ತು. ಕಾಲ ಕಳೆಯುತ್ತಿದ್ದಂತೆ ಕೆರೆಯ ಸರಿಯಾದ ನಿರ್ವಹಣೆ ಕೊರತೆಯಿಂದ ಕೆರೆಯಲ್ಲಿ ಮಣ್ಣು ತುಂಬಿ ಕೆರೆಯೇ ಮಾಯವಾಗುವ ಮಟ್ಟಕ್ಕೆ ತಲುಪಿದ್ದು ಜನರ ಉಪಯೋಗಕ್ಕೆ ಬಾರದಂತಾಗಿತ್ತು. ಈ ಮೊದಲು ಏಪ್ರಿಲ್ ಮೇ ಅಂತ್ಯದ ವರೆಗೆ ಸಮೃದ್ಧ ಜಲರಾಶಿ ಹೊಂದಿ ನೂರಾರು ಎಕರೆ ಪ್ರದೇಶಕ್ಕೆ ಆಸರೆಯಾಗಿದ್ದ ಕೆರೆ ಇತ್ತೀಚಿನ ದಿನಗಳಲ್ಲಿ ಬಹು ಬೇಗನೆ ಬತ್ತಿಹೋಗುತ್ತಿದ್ದು ಯಾರಿಗೂ ಉಪಯೋಗವಿಲ್ಲದಂತಾಗಿತ್ತು. ಇದನ್ನೆಲ್ಲ ಮನಗಂಡು ಸ್ಥಳೀಯ ಗ್ರಾ.ಪಂ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಊರು ನಮ್ಮ ಕೆರೆ ಅಭಿಯಾನದಡಿ ಪುರಾತನ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಲಾಗಿದೆ.

ನೀರಿನ ಸಮಸ್ಯೆ ಪರಿಹಾರ

ಸುಮಾರು ಅರ್ಧ ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಕೆರೆ ಇದಾಗಿದ್ದು ಇಲ್ಲಿನ ಸಮೀಪದ ನೂರಾರು ಎಕರೆ ಕೃಷಿ ಭೂಮಿಗೆ ವರದಾನವಾಗಿತ್ತು. ಅಲ್ಲದೆ ಸ್ಥಳೀಯ 500ಕ್ಕೂ ಅಧಿಕ ಮನೆಗಳ ಉಪಯೋಗಕ್ಕೆ ಬರುತ್ತಿತ್ತು. ಇದೀಗ ಕೆರೆ ಅಭಿವೃದ್ಧಿ ಕಾರ್ಯ ನಡೆದಿದ್ದು, ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗುವ ಸಾಧ್ಯತೆಯಿದೆ. ಅಲ್ಲದೆ ಗ್ರಾಮದ ಜನರಿಗೆ ಬೇಸಿಗೆಯಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆಯೂ ನೀಗಲಿದೆ. ಬಳ್ಳಿ ಕಂಬಳ, ಕಡಂಬೆಟ್ಟು, ಕೋರಿ ಪಲ್ಕೆ, ಬಳ್ಳಿಬೆಟ್ಟು ಅರಣ್ಯ ಪ್ರದೇಶಗಳಿಂದ ಹರಿದು ಬರುವ ನೀರು ಈ ಕೆರೆ ಸೇರುತ್ತದೆ. ಹೀಗೆ ಕೆರೆಯಲ್ಲಿ ಶೇಖರಣೆಯಾದ ನೀರು ವರ್ಷಪೂರ್ತಿ ಸ್ಥಳೀಯರ ಉಪಯೋಗಕ್ಕೆ ಬರಲಿದೆ.

* ಎಣ್ಣೆಹೊಳೆ ಅಮೃತನಗರ ಕೆರೆ ಪುನಶ್ಚೇತನ * ನಮ್ಮ ಊರು ನಮ್ಮ ಕೆರೆ ಅಭಿಯಾನದಡಿ ಪುರಾತನ ಕೆರೆ ಜೀರ್ಣೋದ್ಧಾರ * ಸ್ಥಳೀಯ 500ಕ್ಕೂ ಅಧಿಕ ಮನೆಗಳಿಗೆ, ಕೃಷಿಗೆ ಉಪಯೋಗ* ಪರಿಸರದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ

ಕೃಷಿಗೆ ವರದಾನ

ಇಲ್ಲಿನ ಕೆರೆಯ ನೀರನ್ನೇ ಬಳಕೆ ಮಾಡಿಕೊಂಡು ಹಲವು ದಶಕಗಳಿಂದಲೂ ಈ ಭಾಗದ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುಬೇಗನೆ ಬತ್ತುತ್ತಿದ್ದ ಪರಿಣಾಮ ಕೃಷಿಗೂ ಉಪಯೋಗವಿಲ್ಲದಂತಾಗಿತ್ತು. ಸ್ಥಳೀಯ ಮರ್ಣೆ ಗ್ರಾ.ಪಂ. ಹಾಗೂ ಧರ್ಮಸ್ಥಳ ಯೋಜನೆ ಮೂಲಕ ಪಾಳು ಬಿದ್ದ ಕೆರೆಗೆ ಮರುಜೀವ ದೊರೆತಿದ್ದು ಈ ಭಾಗದ ನೂರಾರು ಎಕರೆ ಕೃಷಿಭೂಮಿಗೆ ವರದಾನವಾಗಲಿದೆ.

ಈ ಹಿಂದೆ ಕೃಷಿ ಸಹಿತ ನೂರಾರು ಮನೆಗಳಿಗೆ ನೀರಿನ ಸಮಸ್ಯೆ ನೀಗುತ್ತಿದ್ದ ಕೆರೆ ಪಾಳುಬಿದ್ದು ಮರೆಯಾಗಿತ್ತು. ಇದೀಗ ಮತ್ತೆ ಕೆರೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಬಹುತೇಕ ಮನೆಗಳಿಗೆ ಹಾಗೂ ಕೃಷಿಭೂಮಿಗೆ ಪ್ರಯೋಜನಕಾರಿಯಾಗಲಿದೆ. -ರಾಜೇಶ್, ಮರ್ಣೆ ಗ್ರಾಪಂ ಸದಸ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಊರು ನಮ್ಮ ಕೆರೆ ಅಭಿಯಾನದಡಿಯಲ್ಲಿ ಸ್ಥಳೀಯ ಮರ್ಣೆ ಗ್ರಾ.ಪಂ. ಹಾಗೂ ಸ್ಥಳೀಯರ ಸಹಕಾರದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸಾವಿರಾರು ವರ್ಷಗಳ ಪುರಾತನ ಕೆರೆಗೆ ಮರುಜೀವ ನೀಡಿದ ಪರಿಣಾಮ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿ, ಕೃಷಿ, ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. -ವಿಜಯ ಕಾಮತ್, ಸೇವಾ ಪ್ರತಿನಿಧಿ https://www.vijayavani.net/ambedkars-achievements-are-a-beacon-for-all https://www.vijayavani.net/bakery-food-vendors-association-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net