

ಗುರುಪುರ: ಮುಸ್ಲಿಮರಿಗೆ ಜಮೀನು ನೀಡಿದರೆ ಅಧಿಕಾರಿಗಳನ್ನು ನೇಣಿಗೇರಿಸುತ್ತೇನೆ ಎಂದಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಿ, ಕ್ರಮ ಜರುಗಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಮೂಡುಬಿದಿರೆ ಕ್ಷೇತ್ರ ಸಮಿತಿ ವತಿಯಿಂದ ಮಂಗಳವಾರ ಬಜ್ಪೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, ರಾಹುಲ್ ಗಾಂಧಿ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇನೆ ಎಂದು ಭಾರತ್ ಜೋಡೋ ಯಾತ್ರೆ ಮಾಡಿದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿರುವ ಸಂಘಿ ಮನಃಸ್ಥಿತಿಯ ಶಾಸಕರನ್ನು ತಿಳಿಯುವಲ್ಲಿ ಅವರು ಸೋತಿದ್ದಾರೆ. ಮುಸ್ಲಿಮರ ಮೇಲೆ ಅನ್ಯಾಯ, ಹಲ್ಲೆ ನಡೆದರೆ ಅದನ್ನು ಕೇಳಲು ಒಬ್ಬನೇ ಒಬ್ಬ ಮುಸ್ಲಿಂ ಶಾಸಕನಿಲ್ಲ, ಅವರೆಲ್ಲ ಸತ್ತಿದ್ದಾರೆ ಎಂದು ಕಿಡಿ ಕಾರಿದರು.
ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಬಜ್ಪೆ ಮಾತನಾಡಿ, ಜಾತ್ಯತೀತ ಮುಖವಾಡ ಹೊತ್ತಿರುವ ಸಿದ್ದರಾಮಯ್ಯ ಮಾತೆತ್ತಿದರೆ ಎಸ್‌ಐಟಿ ರಚಿಸಿ ತನಿಖೆ ಮಾಡಿಸುವೆ ಎನ್ನುತ್ತಾರೆ. ನಿಮಗೆ ಧೈರ್ಯವಿದ್ದರೆ ಮೊದಲಾಗಿ ನಿಮ್ಮದೇ ಪಕ್ಷದಲ್ಲಿರುವ ಸಂಘಿ ಮನಃಸ್ಥಿತಿಯ ಶಾಸಕರನ್ನು ಪತ್ತೆ ಹಚ್ಚಿ ಎಂದು ಸವಾಲೆಸೆದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಶಾದ್ ಹಳೆಯಂಗಡಿ ಪ್ರಾಸ್ತಾವಿಕ ಮಾತನ್ನಾಡಿದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್, ಕಾರ್ಯದರ್ಶಿ ಇರ್ಶಾದ್ ಬಜ್ಪೆ, ಕೋಶಾಧಿಕಾರಿ ಅಯ್ಯೂಬ್ ಸೂರಿಂಜೆ, ಬಜ್ಪೆ ಪಪಂ ಎಸ್‌ಡಿಪಿಐ ಸಮಿತಿ ಅಧ್ಯಕ್ಷ ಹಸೈನಾರ್ ಬಜ್ಪೆ ಹಾಗೂ ಪಕ್ಷ ಕಾರ್ಯಕರ್ತರರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಇರ್ಫಾನ್ ಮೂಡುಬಿದಿರೆ ನಿರೂಪಿಸಿದರು.