

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿಜ್ಞಾನ, ತಂತ್ರಜ್ಞಾನ, ಮಾನವಿಕ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಆಳವಾದ ಜ್ಞಾನ ಆಧಾರಿತ ತಾರ್ಕಿಕ ಚಿಂತನೆಯ ಬಲದಲ್ಲಿ ದೇಶದ ರಚನಾತ್ಮಕ ಬೆಳವಣಿಗೆಯತ್ತ ವಿದ್ಯಾರ್ಥಿ ಸಮೂಹ ಗಮನ ಕೇಂದ್ರೀಕರಿಸಬೇಕು ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶನಿವಾರ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಕಾಲೇಜು ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಮತ್ತು ರ್ಯಾಂಕ್ ಮನ್ನಣೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರಾದ ತಕ್ಷಣ ಕಲಿಕೆಯ ಯಾನ ನಿಲ್ಲುವುದಿಲ್ಲ. ಜ್ಞಾನಾರ್ಜನೆಯ ಹೆಜ್ಜೆಗಳು ನಿರಂತರವಾಗಿರುತ್ತವೆ. ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಕುರಿತು ವಿಸ್ತೃತ ಜ್ಞಾನ ಪಡೆದು ದೇಶಕ್ಕೆ ಬೇಕಾದ ರಚನಾತ್ಮಕ ಮೌಲಿಕ ಸಂಪನ್ಮೂಲವಾಗಿ ಯುವಸಮೂಹ ರೂಪುಗೊಳ್ಳಬೇಕು ಎಂದರು.
ಪದವೀಧರರು, ರ್ಯಾಂಕ್ ಪಡೆದ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಪದವೀಧರರೆಲ್ಲರೂ ವಿದೇಶಕ್ಕೆ ಹೋಗುವ ಬದಲು ಭಾರತದಲ್ಲಿಯೇ ಉಳಿದುಕೊಂಡು ಸಾಧನೆಯ ಹೆಜ್ಜೆಗಳನ್ನು ಕ್ರಮಿಸಬೇಕು ಎಂದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ವಂದ್ರ ಎಸ್, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ., ಉಪಪ್ರಾಂಶುಪಾಲ ಡಾ.ಕೆ.ಎನ್.ಶಶಿಶೇಖರ ಕಾಕತ್ಕರ್ ಉಪಸ್ಥಿತರಿದ್ದರು.
ಡಾ.ನೆಫೀಸತ್ ಪಿ., ಸ್ವಾತಿ ಬಿ.ನಿರೂಪಿಸಿದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಸ್ವಾಗತಿಸಿದರು. ಆಡಳಿತಾತ್ಮಕ ಕುಲಸಚಿವ ಡಾ.ಶಲೀಪ್ ವಂದಿಸಿದರು. 2023-24ನೇ ಶೈಕ್ಷಣಿಕ ವರ್ಷದಲ್ಲಿ ರ್ಯಾಂಕ್ ಗಳಿಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.
ತಂತ್ರಜ್ಞಾನ ಅಭಿವೃದ್ಧಿಗೊಂಡ ತಕ್ಷಣವೇ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಬಾರದು. ಶಾಶ್ವತವಾದ ಸಾಮಾಜಿಕ ಸದುಪಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕು. ಬೌದ್ಧಿಕ, ಶೈಕ್ಷಣಿಕ ಸಾಮರ್ಥ್ಯದ ಆಧಾರದ ಕೌಶಲಯುತ ಸೂತ್ರಗಳನ್ನು ಅನ್ವಯಿಸಿ ಸಾಮಾಜಿಕ ಪ್ರಯೋಜನಕ್ಕೆ ಹೆಚ್ಚು ಒತ್ತು ನೀಡಬೇಕು. ಹಾಗಾದಾಗ ಮಾತ್ರ ವಿಜ್ಞಾನ, ತಂತ್ರಜ್ಞಾನ ಸಮಾಜಪರವಾಗುವುದಕ್ಕೆ ಸಾಧ್ಯ. - ಡಾ.ಡಿ.ವೀರೇಂದ್ರ ಹೆಗ್ಗಡೆ, ಎಸ್.ಡಿ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ