

ಬೆಳ್ತಂಗಡಿ: ಹೊಸ ಕಾಲದ ಸಾಮಾಜಿಕ ಜಾಲತಾಣಗಳ ಸಂವಹನದ ಟ್ರೆಂಡ್ಗೆ ಸಂಸ್ಕೃತಿನಿಷ್ಠ ಸಾಹಿತ್ಯಿಕ ಆಯಾಮ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಸೋಮವಾರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಕುವೆಂಪು ಅವರ 120ನೇ ಜನ್ಮದಿನೋತ್ಸವದ ಪ್ರಯುಕ್ತ ಆಯೋಜಿಸಲಾದ ‘ವಿಶ್ವ ಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯಕ ಮತ್ತು ವೈಚಾರಿಕ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಸಮೂಹ ಮಾಧ್ಯಮಗಳು ಸೇರಿದಂತೆ ಇಡೀ ನಾಡು ಕುವೆಂಪು ಅವರ ಶ್ರೇಷ್ಠ ಕೊಡುಗೆಗಳನ್ನು ಅರ್ಥೈಸಿಕೊಳ್ಳಬೇಕು. ಹಳೆಯದ್ದೆಲ್ಲವನ್ನೂ ನಿರಾಕರಿಸುವ ಮನಃಸ್ಥಿತಿಯಿಂದ ಹೊರಬಂದು ಹಳೆಯದರೊಳಗಿನ ಮೌಲ್ಯ ಅರ್ಥೈಸಿಕೊಳ್ಳಬೇಕು. ಈಗಾಗಲೇ ಆಗಿಹೋದ ಮಹತ್ವದ ಮೌಲಿಕತೆಯನ್ನು ವರ್ತಮಾನದಲ್ಲಿ ಬಿಂಬಿಸುವ ಹಾಗೂ ನೆನಪಿಸುವ ಕಾರ್ಯವನ್ನು ಮಾಡಬೇಕು. ಸಾಮಾಜಿಕ ಜಾಲತಾಣದ ಗುಂಗು ಸರ್ವವ್ಯಾಪ್ತಿಯಾಗಿರುವಾಗ ಹೊಸ ಮಾಧ್ಯಮಗಳನ್ನು ಸಾಂಸ್ಕೃತಿಕ ಜಾಲತಾಣಗಳನ್ನಾಗಿ ಪರಿವರ್ತಿಸಿ ಸಾಹಿತ್ಯವನ್ನು ಪಸರಿಸಬೇಕು. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಶ್ಯಮಾಧ್ಯಮಗಳು ಮಾನವನ ಕಲ್ಪನಾ ಶಕ್ತಿಯನ್ನು ಕುಂದಿಸುತ್ತಿವೆ. ಈ ನಿಟ್ಟಿನಲ್ಲಿ ಯುವಸಮೂಹ ಪುಸ್ತಕದ ಮೊರೆಹೋಗಬೇಕು. ಕುವೆಂಪು ಬರಹಗಳಿಗೆ ಜೀವನದೃಷ್ಟಿ ಹಾಗೂ ಮಾನವನ ಚಿಂತನೆಗಳನ್ನು ಬದಲಾಯಿಸುವ ಶಕ್ತಿಯಿದೆ. ಹಳೆಯ ವಿಚಾರಧಾರೆಗಳಿಗೆ ಮರುರೂಪ ನೀಡಿ ಹೊಸ ವ್ಯಾಖ್ಯಾನ ನೀಡುವ ವಿಶೇಷ ಕರ್ತೃತ್ವ ಶಕ್ತಿ ಕುವೆಂಪು ಅವರಿಗಿತ್ತು ಎಂದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು ಬರಹಗಳನ್ನು ಓದುವ ಹಾಗೂ ಅವರ ವಿಚಾರಧಾರೆಗಳಿಗೆ ಒಗ್ಗಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಅರಿವಿನ ಹಾಡುಗಾರ ನಾದ ಮಣಿನಾಲ್ಕೂರು ಕುವೆಂಪು ಹಾಡುಗಳನ್ನು ಹಾಡಿದರು. ಎಸ್.ಡಿ.ಎಂ. ಕಲಾಕೇಂದ್ರದ ಯಶವಂತ ಬೆಳ್ತಂಗಡಿ ನಿರ್ದೇಶಿತ ‘ನಾಗಿ ಕಥನ ಕವನ ರೂಪಕ’ವನ್ನು ಎಸ್ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ಸೋನಿಯಾ ಯಶೋವರ್ಮ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ವಂದಿಸಿದರು.
ಸರಕು ಸಂಸ್ಕೃತಿಯ ವಿಸ್ತರಣೆ
ಹೊಸ ಕಾಲದ ಸಂವಹನದ ಕ್ರಮಗಳು ಬದಲಾಗಿವೆ. ಸೋಷಿಯಲ್ ಮೀಡಿಯಾ ವೇದಿಕೆಗಳು ಸರಕು ಸಂಸ್ಕೃತಿಯ ವಿಸ್ತರಣೆಯ ರೂಪಗಳಾಗಿ ವಿಜೃಂಭಿಸುತ್ತಿವೆ. ವೀಕ್ಷಕರನ್ನು ಉತ್ಪನ್ನಗಳನ್ನಾಗಿ ಗ್ರಹಿಸಿ ಅದಕ್ಕೆ ತಕ್ಕಂತೆ ಜಾಳುಜಾಳಾದ ಕಂಟೆಂಟ್ಗಳನ್ನು ನೀಡುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಸಂದರ್ಭ ಈ ವೇದಿಕೆಗಳಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಶಕ್ತಿ ನೀಡಬೇಕು. ನೋಡುವ, ಓದುವ ಮತ್ತು ಗೀಳಾಗಿಸಿಕೊಂಡು ಅವಲಂಬಿತವಾಗುವರಿಗಿಂತ ಸಾಹಿತ್ಯ, ಸಂಸ್ಕೃತಿ ನೆಲೆಯಲ್ಲಿ ಗ್ರಹಿಸುವ ಸಹೃದಯರನ್ನು ಸೃಷ್ಟಿಸುವ ಅಗತ್ಯವಿದೆ. ಈ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳು ಸಂಸ್ಕರಿತಗೊಳ್ಳಬೇಕು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.