

ಬೆಳ್ತಂಗಡಿ: ವ್ಯಕ್ತಿತ್ವ ನಾಶ ಆದರೆ ಜೀವನದಲ್ಲಿ ಎಲ್ಲ ಕಳೆದುಕೊಂಡ ಹಾಗೆ. ದುಶ್ಚಟದಿಂದ ಆರ್ಥಿಕ ನಷ್ಟ, ಮಾನನಷ್ಟ ಹಾಗೂ ಸಮಾಜದಲ್ಲಿ, ಕುಟುಂಬದಲ್ಲಿ ಅಗೌರವ ಉಂಟಾಗುತ್ತದೆ. ಶಿಬಿರ ಎಂದರೆ ಒಬ್ಬ ವ್ಯಕ್ತಿ ಕನ್ನಡಿ ಮುಂದೆ ನಿಂತಾಗ ಮುಖದಲ್ಲಿರುವ ದೋಷಗಳನ್ನು ಕಂಡುಕೊಳ್ಳುವ ಹಾಗೆ. ಶಿಬಿರದಲ್ಲಿ ನಿಮ್ಮ ದೋಷಗಳನ್ನು ತೋರಿಸಿ ಪರಿವರ್ತಿಸುವ ಕೆಲಸ ಮಾಡುತ್ತಾರೆ. ಶಿಬಿರ ಮುಗಿಸಿ ಹೋದ ಮೇಲೆ ಮನಸ್ಸು ಚಂಚಲವಾಗದಂತೆ ಹತೋಟಿಯಲ್ಲಿಟ್ಟುಕೊಳ್ಳಬೇಕು. ಎಲ್ಲರೂ ದೃಢವಾದ ನಿರ್ಧಾರಗಳನ್ನು ತೆಗೆದುಕೊಂಡು ಮದ್ಯಪಾನ ಚಟದಿಂದ ಮುಕ್ತರಾಗಿ ಹೊಸ ಜೀವನವನ್ನು ನಡೆಸಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 238ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಾದ್ಯಂತ 65ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಕುಮಾರ್ ಟಿ., ರಮೇಶ್, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಜ.6ರಂದು ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.