

ಚನ್ನಗಿರಿ: ಶಿಲ್ಪಕಲೆಗಾಗಿ ಜೀವನ ಮೀಸಲಾಗಿಟ್ಟಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಹೆಸರು ಮತ್ತು ಶಿಲ್ಪಕಲೆಗಳು ಸೂರ್ಯಚಂದ್ರರು ಇರುವ ತನಕ ಜೀವಂತವಾಗಿರುತ್ತವೆ ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ನಾಡಹಬ್ಬಗಳ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಕಾರಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತಮ ಕೆಲಸ, ಸೇವೆ ಮಾಡಿದರೆ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಇರಲು ಸಾಧ್ಯ ಎನ್ನುವುದನ್ನು ಜಕಣಾಚಾರಿ ಅವರು ಶಿಲ್ಪಕಲೆ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಕೆತ್ತನೆಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯ ಪಂಚ ಕಸುಬುಗಳನ್ನು ಅವಲಂಬಿಸಿದ್ದು, ಇವುಗಳನ್ನು ಉಳಿಸಿಕೊಂಡು ಹೋಗಬೇಕು. ಸರ್ಕಾರ ನಮ್ಮ ಸಮಾಜಕ್ಕೆ ವಿಶ್ವಕರ್ಮ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲು ಅವಕಾಶ ನೀಡಿದೆ. ವರ್ಷದಲ್ಲಿ ಎರಡು ಬಾರಿ ಸಮಾಜದವರು ಒಂದೇ ಸೂರಿನಲ್ಲಿ ಸೇರುವಂತಾಗಲು ಉತ್ತಮ ಅವಕಾಶವಾಗಿದೆ ಎಂದರು.
ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ಮಾತನಾಡಿ, ಜಕಣಾಚಾರಿ ಭೂಮಿಗೆ ಬರದಿದ್ದರೆ ಶಿಲ್ಪಕಲೆಯು ಜನರಿಗೆ ಪರಿಚಯ ಆಗುತ್ತಿರಲಿಲ್ಲ. ಬೇಲೂರು, ಹಳೇಬೀಡುಗಳಲ್ಲಿ ನಿರ್ಮಾಣಗೊಂಡಿರುವ ದೇಗುಲಗಳನ್ನು ಇಂದಿಗೂ ಶಿಲ್ಪಕಲೆ ಮಾಡುವಂಥ ಪೀಳಿಗೆಗೆ ಮಾದರಿಯಾಗಿದೆ. ಕನ್ನಡನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯದ ತಾಲೂಕು ಗೌರವಾಧ್ಯಕ್ಷ ಶಂಕರಾಚಾರ್, ಬುಸ್ಸೇನಹಳ್ಳಿ ನಾಗರಾಜಾಚಾರ್, ಶ್ರೀಧರ ಇತರರಿದ್ದರು.