

ನರೇಗಲ್ಲ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಇರುವ ಐತಿಹಾಸಿಕ ದೇವಾಲಯಗಳು ಹಲವು ವಿಶೇಷಗಳನ್ನು ಹೊಂದಿವೆ. ಸುಂದರ ಶಿಲ್ಪಕಲೆಯ ಈ ದೇಗುಲಗಳು ಕಾಯಕಲ್ಪದ ನಿರೀಕ್ಷೆಯಲ್ಲಿವೆ.
ನರೇಗಲ್ಲ ಪಟ್ಟಣದಲ್ಲಿನ 10ಕ್ಕೂ ಅಧಿಕ ಶಾಸನಗಳು, ವೀರಗಲ್ಲುಗಳು ಸೇರಿದಂತೆ ಚಂದ್ರಮೌಳೇಶ್ವರ, ಸೋಮನಾಥೇಶ್ವರ, ಭೂತನಾಥೇಶ್ವರ, ವೀರನಾರಾಯಣ, ಶ್ರೀ ಶೈಲ ಮಲ್ಲಿಕಾರ್ಜುನ (ಕೊಂತಿ ಮಲ್ಲಯ್ಯ), ತ್ರೀಪುಕಾಂತೇಶ್ವರ, ಭೂತನಾತೇಶ್ವರ ದೇವಾಲಯ ಸೇರಿ ತೋಟಗಂಟಿ, ಕೋಚಲಾಪುರ, ಮಲ್ಲಾಪುರ, ನಿಡಗುಂದಿ, ನಿಡಗುಂದಿಕೊಪ್ಪ, ಸೇರಿದಂತೆ ಹೋಬಳಿಯಾದ್ಯಂತ ಇರುವ ಐತಿಹಾಸಿಕ ಪ್ರಾಚೀನ ದೇವಾಲಯಗಳು ಅಪೂರ್ವ ಶಿಲ್ಪಕಲಾ ವೈಭವವನ್ನು ಹೊಂದಿವೆ.
ಆದರೆ, ನಿರ್ವಹಣೆ ಕೊರತೆಯಿಂದ ಬಹುತೇಕ ದೇವಾಲಯಗಳು ಅವಸಾನದ ಅಂಚಿಗೆ ತಲುಪಿವೆ. ಕೆಲವು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಮುಂದಿನ ಪೀಳಿಗೆಗೆ ಗತವೈಭವ ಸಾರುವ ಈ ದೇವಾಲಯಗಳ ಜೀಣೋದ್ಧಾರವೂ ಆಗಬೇಕಿದೆ.
ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ರಾಜ ಮನೆತನದ ಸಾಮಂತರ ಆಳ್ವಿಕೆಯ ಚರಿತ್ರೆ ಹೇಳುವ ಮಹತ್ವದ ಶಾಸನಗಳನ್ನು ಹೊಂದಿರುವ ದೇವಾಲಯಗಳು ಹೇಳ ಹೆಸರಿಲ್ಲದಂತಾಗುತ್ತಿವೆ. ಬಹುತೇಕ ಶಾಸನಗಳು ನಿರ್ಲಕ್ಷ್ಯ್ಕೆ ಒಳಗಾಗಿ ರಸ್ತೆ ಬದಿಯಲ್ಲಿ ಅನಾಥವಾಗಿವೆ.
ಪಟ್ಟಣದಲ್ಲಿನ ಬಹುತೇಕ ಪುರಾತನ ದೇವಾಲಯಗಳ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಅಧ್ಯಯನದ ಬಳಿಕ ಈ ದೇವಾಲಯಗಳ ಮಹತ್ತರ ಮಾಹಿತಿಗಳು ಹೊರಬೀಳಲಿವೆ. ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆ, ಇತಿಹಾಸ ಸಂಶೋಧಕರು ಗಮನ ಹರಿಸಬೇಕಿದೆ. ದೇವಾಲಯಗಳು, ಶಾಸನಗಳು, ಪುಷ್ಕರಣಿಗಳು, ಬಾವಿಗಳು ಹಾಳಾಗುತ್ತಿವೆ. ಮತ್ತೆ ಕೆಲ ದೇವಾಲಯಗಳು ಸುಣ್ಣ ಬಣ್ಣ ಬಳಿದು ಶಿಲ್ಪಗಳು ಕಾಣದಂತಾಗಿವೆ. ಇಲ್ಲಿನ ಕೆತ್ತನೆಗಳೆಲ್ಲವೂ ಸೂಕ್ಷ್ಮತೆಯಿಂದ ಕೊಡಿವೆ. ಆದರೆ ಅವುಗಳಿಗೆ ಸುಣ್ಣ ಬಣ್ಣ ಬಳಿದ ಪರಿಣಾಮ ಸುಣ್ಣದ ಗೊಡೆಯಂತೆ ಭಾಸವಾಗುತ್ತಿವೆ. ಬಹುತೇಕ ದೇವಾಲಯಗಳಿಗೆ ನಾಮಫಲಕವಿಲ್ಲ, ಮೂಲಸೌಕರ್ಯಗಳಂತೂ ಇಲ್ಲವೇ ಇಲ್ಲ.
ನರೇಗಲ್ಲ ಪಟ್ಟಣಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಹಿಂದೆ ಪನ್ನೇರಡು ನರೇಯಂಗಲ್ಲು ಎಂಬ ಹೆರಿನಿಂದ ಹಾಗೂ ಈಗಿನ ಕೋಡಿಕೊಪ್ಪ ಗ್ರಾಮವನ್ನು ಕಿರು ಪನ್ನೇರಡುನರೇಯಂಗಲ್ಲು ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಐತಿಹಾಸಿಕ ದೇವಾಲಯ, ಶಾಸನಗಳು, ವೀರಗಲ್ಲು, ಪುರಾತನ ಬಾವಿ ಹಾಗೂ ಪುಷ್ಕಣಿಗಳು ಅವಸಾನದ ಅಂಚಿನಲ್ಲಿವೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶೇಷವಾಗಿ ಪ್ರವಾಸೋದ್ಯಮ ಸಚಿವರು ಇತ್ತ ಗಮನ ಹರಿಸಬೇಕಿದೆ. - ಡಾ. ಮಲ್ಲಿಕಾರ್ಜುನ ಕುಂಬಾರ ಇತಿಹಾಸ ತಜ್ಞ