

ಬೆಂಗಳೂರು: ಮಕ್ಕಳು, ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿರುವ ಭಾರತ್ ಸ್ಕೌಟ್ಸ್ -ಗೈಡ್ಸ್ ಕರ್ನಾಟಕ ಸಂಸ್ಥೆಯು ಮುಂಬರುವ ಕಾರ್ಯಚಟುವಟಿಕೆಗಳನ್ನು ಪ್ರಕಟಿಸಿದೆ.
ಭಾರತ್ ಸ್ಕೌಟ್ಸ್-ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ ಶುಕ್ರವಾರ ಸುದ್ದಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ 2026ರ ಜ. 22ರಿಂದ 26ರವರೆಗೆ ‘ರಾಷ್ಟ್ರೀಯ ಏಕತಾ ಶಿಬಿರ’ ಆಯೋಜಿಸಲಾಗಿದೆ. ಡಿಸೆಂಬರ್‌ನಲ್ಲಿ ಶಿರಸಿಯಲ್ಲಿ ಜಾಂಬೋರೇಟ್ ಸಂಘಟಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಿಂದ ಕಲ್ಯಾಣ ಕರ್ನಾಟಕ ಜಿಲ್ಲಾ ಸಂಸ್ಥೆಗಳ ಮೂಲಸೌಕರ್ಯಗಳ ಕೆಲಸ ಮಾಡಲಾಗುತ್ತಿದೆ. ಡಿಸಿಎಂ ನಗರಾಭಿವೃದ್ಧಿ ನಿಧಿ, ಜಿಬಿಎ ನೆರವುನಿಂದ ಕೇಂದ್ರ ಕಚೇರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ರಾಜ್ಯ ಜಾಂಬೋರೇಟ್‌ನ್ನು ಕಲಬುರಗಿಯಲ್ಲಿ ಏರ್ಪಡಿಸಲಾಗಿದೆ ಎಂದರು.
8 ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರಪತಿ ಪ್ರಶಸ್ತಿ ವಿತರಣಾ ಸಮಾರಂಭ ಪುನಾರಂಭವಾಗಿದ್ದು, 2016ನೇ ಸಾಲಿಗೆ ನಮ್ಮ ರಾಜ್ಯದಿಂದ 340 ವಿದ್ಯಾರ್ಥಿಗಳು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ ಎಂದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧೀನದ 215 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರೋವರ್ಸ್, ರೇಂಜರ್ಸ್ ಘಟಕ ತೆರೆಯಲಾಗುತ್ತಿದೆ. ಯುವ ಅಪದಮಿತ್ರ ಯೋಜನೆಯಡಿ 3,650 ರೋವರ್ಸ್ ರೇಂಜರ್ಸ್‌ಗಳಿಗೆ ನೀಡಲಾಗುತ್ತಿರುವ ವಿಪತ್ತು ನಿರ್ವಹಣೆ ತರಬೇತಿಗಳನ್ನು 2026ರ ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಪೂರ್ಣಗೊಳಿಸಲಾಗುವುದು. ಕಳೆದ ಸಾಲಿನಲ್ಲಿ ಸಂಸ್ಥೆಗೆ 13 ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಂದಿವೆ ಎಂದು ಸಿಂಧ್ಯ ಹರ್ಷ ವ್ಯಕ್ತಪಡಿಸಿದರು.