

ಹಾಸನ: ಸೇವೆ ಮತ್ತು ಪ್ರಾಯೋಗಿಕ ಚಟುವಟಿಕೆ ಮೂಲಕ ಕಲಿಕೆಯಲ್ಲಿ ಜೀವನೋತ್ಸಾಹ ತುಂಬುವ ಸ್ಕೌಟ್ ಮತ್ತು ಗೈಡ್ಸ್ ಘಟಕ ತೆರೆಯುವುದು ಶಾಲೆಗೆ ಹೆಮ್ಮೆ ಎಂದು ವಿದ್ಯಾಸೌಧ ಪಬ್ಲಿಕ್ ಶಾಲೆ ಪ್ರಾಂಶುಪಾಲ ಪರಮೇಶ್ ಹಲಗೇರಿ ಹೇಳಿದರು.
ವಿಜಯನಗರ ಬಡಾವಣೆಯಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆ ನಿಜಕ್ಕೂ ಮಾದರಿ ಎಂದು ಶ್ಲಾಘಿಸಿದರು.
ವಿದ್ಯಾಸೌಧ ಸ್ಕೌಟ್ ಟ್ರೂಪ್ ಮತ್ತು ಗೈಡ್ ಕಂಪನಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಶಾಲೆಯಲ್ಲಿ ಘಟಕ ಸ್ಥಾಪಿಸಿ ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳಲ್ಲಿರುವ ಕೌಶಲ ಪತ್ತೆ ಹಚ್ಚಿ ಅವರನ್ನು ಕ್ರಿಯಾಶೀಲರನ್ನಾಗಿಸುವ ಪ್ರಯತ್ನ ಶ್ಲಾಘನೀಯ. ಸ್ಕೌಟ್ ಮತ್ತು ಗೈಡ್ಸ್ ಬೆಳವಣಿಗೆಗೆ ಶಾಲೆ ವತಿಯಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.
ವಿವಿಧ ವಯೋಮಾನದ ಮಕ್ಕಳು ಭಾಗವಹಿಸಬಹುದಾದ ಕಬ್ಸ- ಬುಲ್ಬುಲ್ಸ, ಸ್ಕೌಟ್- ಗೈಡ್ಸ್, ರೋವರ್ಸ್-ರೇಜರ್ಸ್ ಕುರಿತು ರಾಜ್ಯ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕಾ ವಿವರಿಸಿದರು. ನಿಕಟಪೂರ್ವ ಜಂಟಿ ಕಾರ್ಯದರ್ಶಿ ಕಾಂಚನಮಾಲಾ ಸ್ಕೌಟಿಂಗ್ ಇತಿಹಾಸವನ್ನು ಪರಿಚಯಿಸಿದರು. ಸ್ಕೌಟ್ಸ್ ಗೈಡ್ಸ್ ಸ್ಥಾಪನೆಯಾದ ಇತಿಹಾಸ ಕುರಿತು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ವನಜಾಕ್ಷಿ ವಿವರಿಸಿದರು.
ವಿದ್ಯಾಸೌಧ ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲ ಮೋಹನ್ ಕುಮಾರ್, ನಾಜಿಯಾ, ಡಿ.ಟಿ.ಪೂರ್ಣಿಮಾ, ಪೂಜಾ, ನಿಶಾಂತ್, ಚಂದನ್ ಚರ್ಚಿಲ್ ಇತರರಿದ್ದರು.