ಸರ್ಕಾರದ ನಿರ್ಲಕ್ಷೃದಿಂದ ಶಾಲೆಗಳಿಗೆ ಬೀಗ

SRP_06_01
Published on

ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸದೆ ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದೆ. ಪರಿಣಾಮ ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗಬೇಕಿದ್ದ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರುವ ಗ್ರಾಮದ ಮಹೇಶ್ ಅವರ ಪುತ್ರ ಜೀವನ್ ಅವರಿಗೆ ಮಂಗಳವಾರ ದಿ.ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಗೌರವಿಸಿದ ಬಳಿಕ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಆದರೆ ಕೊಠಡಿ, ಶೌಚಗೃಹ, ಕ್ರೀಡಾ ಪರಿಕರಗಳು, ಶುದ್ಧ ಕುಡಿಯುವ ನೀರಿನ ಕೊರತೆ ಇಂತಹ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ 10 ವರ್ಷಗಳಿಂದೀಚೆಗೆ 351 ಶಾಲೆಗಳು ಮುಚ್ಚಿವೆ. ತಾಲೂಕಿನಲ್ಲಿ 15 ಶಾಲೆಗಳು ಬಂದ್ ಆಗಿವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ ಮೂರು ಸರ್ಕಾರಿ ಶಾಲೆಗಳು ಮುಚ್ಚಿವೆ. ಹೀಗೆ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಮುಂದಿನ 10 ವರ್ಷಗಳಲ್ಲಿ ಶೇ.50ರಷ್ಟು ಸರ್ಕಾರಿ ಶಾಲೆಗಳು ಮುಚ್ಚಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೂಲ ಸೌಕರ್ಯ ಕೊರತೆಯ ಕಾರಣದಿಂದ ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ದುಬಾರಿ ಶುಲ್ಕವಾದರೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಆದ್ಯತೆಯ ಕ್ಷೇತ್ರಗಳೆಂದು ಪರಿಗಣಿಸಿ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಎಂಬಿಬಿಎಸ್ ಕೋರ್ಸ್‌ಗೆ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರುವುದು ಸಂತಸದ ಸಂಗತಿ. ವೈದ್ಯರನ್ನು ದೇವರ ಸ್ವರೂಪ ಎಂದು ಜನರು ಭಾವಿಸಿದ್ದಾರೆ. ಎಂ.ಶೆಟ್ಟಹಳ್ಳಿಯ ಡಾ.ದಾಳೇಗೌಡ ಮತ್ತು ಡಾ.ಸೋಮಶೇಖರ್ ಉತ್ತಮ ಸೇವೆಯ ಮೂಲಕ ಜನ ಮನ್ನಣೆ ಗಳಿಸಿದ್ದಾರೆ. ವೈದ್ಯರಾಗಬೇಕು ಎಂಬ ಕನಸು ಕಾಣುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ, ಮುಖಂಡರಾದ ದರ್ಶನ್ ಲಿಂಗರಾಜು, ಇಂದ್ರಕುಮಾರ್, ಎಂ.ಆರ್.ಯತಿರಾಜ್, ಎಸ್.ಕೆ.ಮಂಜುನಾಥ್, ಎಂ.ಕೆ.ಸಿದ್ದೇಗೌಡ, ಬಿ.ಸಿ.ಕೃಷ್ಣೇಗೌಡ, ಬೋರೇಗೌಡ, ಶಾರದಾರವಿ, ದೇವರಾಜು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net