

ಮಸ್ಕಿ: ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ನಿಗಾವಹಿಸಬೇಕು. ಒಂದು ವಾರದೊಳಗೆ ಕ್ಯಾಬ್ ಸೇಫ್ಟಿ ಸಮಿತಿ ರಚನೆ ಮಾಡಬೇಕು ಎಂದು ತಹಸೀಲ್ದಾರ್ ಡಾ. ಮಲ್ಲಪ್ಪ ಕೆ. ಯರಗೋಳ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಖಾಸಗಿ ಶಾಲಾ ಕಾಲೇಜುಗಳ ಮುಖ್ಯಶಿಕ್ಷಕರ ಮತ್ತು ಆಡಳಿತ ಮಂಡಳಿಯವರ ಸಭೆಯಲ್ಲಿ ಮಾತನಾಡಿದರು.
ಮಾನ್ವಿಯಲ್ಲಿ ನಡೆದಂಥ ಘಟನೆ ಅದೊಂದು ಕರಾಳ ದಿನವಾಗಿದೆ. ಅಂತಹ ಘಟನೆಗಳು ಮರುಕಳಿಸದ ಹಾಗೆ ಶಾಲೆ ಮುಖ್ಯಸ್ಥರು ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಕ್ಯಾಬ್ ಸೇಫ್ಟಿ ಕಮಿಟಿಯಲ್ಲಿ ವಾಹನ ಮಾಲೀಕರು, ಪೋಷಕರು, ಶಾಲಾ ಆಡಳಿತ ಮಂಡಳಿಯವರು ಇರಬೇಕು. ಸುರಕ್ಷಿತ ಬಗ್ಗೆ ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಮೋಟಾರ್ ವಾಹನ ಕಾಯ್ದೆಯಡಿ ವಾಹನಗಳ ತಪಾಸಣೆ ನಡೆಸಿ ವಾಹನ ಸುರಕ್ಷಿತ ಬಗ್ಗೆ ಪರೀಕ್ಷಿಸಿಕೊಳ್ಳಬೇಕು.
ಶಾಲಾ ವಾಹನ ಚಾಲಕರು ಜಾಗರೂಕತೆಯಿಂದ ವಾಹನಗಳನ್ನು ಓಡಿಸಲು ಸೂಚನೆ ನೀಡಬೇಕು. ವಾಹನಗಳಲ್ಲಿ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಿಪಿಐ ಬಾಲಚಂದ್ರ ಡಿ. ಲಕ್ಕಂ ಮಾತನಾಡಿ, ಮಕ್ಕಳ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಶಾಲೆಗಳಿಗೆ ಭೇಟಿ ನೀಡಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಶಾಲಾ ವಾಹನಗಳ ತಪಾಸಣೆಯನ್ನು ಕಡ್ಡಾಯವಾಗಿ ಎಲ್ಲರೂ ಮಾಡಿಸಬೇಕು. ಸಂಚಾರ ಮಾಡುವ ಸಮಯದಲ್ಲಿ ಹೆಚ್ಚಿನ ನಿಗಾವಹಿಸಿ ವಾಹನ ಚಲಾಯಿಸಬೇಕು ಎಂದರು.