

ಕುಶಾಲನಗರ: ಹಳೆಯ ವಿದ್ಯಾರ್ಥಿ ಸಂಘಗಳು ಹೆಸರಿಗೆ ಮಾತ್ರವಾಗಿ ಉಳಿಯದೆ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಉಪಪ್ರಾಂಶುಪಾಲ ಪರಮೇಶ್ವರಪ್ಪ ಅಭಿಪ್ರಾಯಪಟ್ಟರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ವಿದ್ಯಾರ್ಥಿಗಳು ಬದುಕಿನ ಏಳು-ಬೀಳುಗಳ ಮಹತ್ವ, ವಿದ್ಯಾರ್ಥಿ ಜೀವನದ ಮೌಲ್ಯವನ್ನು ತಿಳಿದಿರುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಹೊಸ ಸಮಾಜದ ನಿರ್ಮಾಣಕ್ಕೆ ನೆರವಾಗಬೇಕು ಎಂದರು.
ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ ಗೌರವ ಅಧ್ಯಕ್ಷ ವಿ.ಎಸ್.ಆನಂದ್‌ಕುಮಾರ್ ಮಾತನಾಡಿ, ಕಲಿತ ಶಾಲೆಯ ಶಿಕ್ಷಕರು ಮತ್ತು ಗೆಳೆಯರು ಸದಾ ನೆನಪಿನಲ್ಲಿ ಉಳಿಯುವುದೆ ವಿದ್ಯಾರ್ಥಿ ಜೀವನದ ಅತಿ ದೊಡ್ಡ ಗಳಿಕೆ ಎಂದರು.
ಶಿಕ್ಷಕ ಉ.ರಾ.ನಾಗೇಶ್ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿ ಸಂಘಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಉತ್ಸಾಹ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿ ಎಂದು ಆಶಿಸಿದರು.
ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷೆ ದಿವ್ಯಾ, ಪ್ರಧಾನ ಕಾರ್ಯದರ್ಶಿ ಎಸ್.ಆದಂ, ಕಾನೂನು ಸಲಹೆಗಾರ ಶರತ್ ಕುಮಾರ್, ಸಂಘಟನಾ ಕಾರ್ಯದರ್ಶಿ ರವಿ, ನಿರ್ದೇಶಕರಾದ ಹನೀಫ್, ಗಣೇಶ್, ರಿನೀತಾ, ಲಕ್ಷ್ಮೀ ಮತ್ತಿತರರು ಹಾಜರಿದ್ದರು.