ತಲೆಬೇನೆ ಹೆಚ್ಚಿಸಿದ ಶಾಲೆ ಬಿಟ್ಟವರು

WEB2
Published on

ಹುಡುಕಾಡುವುದೇ ಶಿಕ್ಷಕರಿಗೆ ಸವಾಲು ಬೋಧನೆ ಬಿಟ್ಟು ಪ್ರತಿದಿನ ಮಕ್ಕಳನ್ನು ಅರಸುವ ಕೆಲಸ

ಗುಡಿಬಂಡೆ: ಶಿಕ್ಷಣ ಪ್ರತಿಯೊಬ್ಬರಿಗೂ ಮುಖ್ಯ. ಯಾವುದೇ ಮಕ್ಕಳು ಕಲಿಕೆಯಿಂದ ಹೊರಗುಳಿಯಬಾರದು ಎಂದು ವಿನೂತನ ಕಾರ್ಯಕ್ರಮ ಜಾರಿ ಮಾಡುವ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಶಿಕ್ಷಣ ಇಲಾಖೆೆ ಆದೇಶಗಳನ್ನು ಮಾಡುತ್ತಿದೆ. ಆದರೆ, ಇದು ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಶಾಲೆ ಬಿಟ್ಟ ಮಕ್ಕಳಿಗಾಗಿ ಪ್ರತಿದಿನ ಮಕ್ಕಳ ಮನೆಗಳಿಗೆ ತೆರಳಿ ಹುಡುಕಬೇಕಾಗಿದೆ.

ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಟ್ಟು 24 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದು, ಅವರನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಕರು ಹರಸಹಾಸ ಪಡುವಂತಾಗಿದೆ. ಕೆಲ ಪಾಲಕರು ಮಕ್ಕಳನ್ನು ಶಾಲೆಗೆ ಹೋಗುವಂತೆ ಬಲವಂತ ಮಾಡಿದರೂ ಮಕ್ಕಳು ನಿರಾಕರಿಸುತ್ತಿದ್ದಾರೆ. ಶಾಲೆಗೆ ಹೋಗುವಂತೆ ರಾತ್ರಿ ಮಗುವನ್ನು ಒಪ್ಪಿಸಿದರೆ, ಮರುದಿನ ಬೆಳಗ್ಗೆ ಶಾಲೆಗೆ ಹೋಗುವಷ್ಟರಲ್ಲಿ ಮಗು ಮಾಯವಾಗಿರುತ್ತದೆ. ಇನ್ನು ಕೆಲ ಮಕ್ಕಳು ಕೆಲಸ ಕಾರ್ಯಗಳಿಗಾಗಿ ಬೇರೆ ಊರುಗಳಿಗೆ ತೆರಳಿದ್ದು, ವರ್ಷಗಳೇ ಕಳೆದಿದ್ದರೂ ಮತ್ತೆ ಶಾಲೆಗೆ ಸೇರಿರುವ ಗ್ರಾಮಗಳಿಗೆ ಬರುತ್ತಿಲ್ಲ. ಇನ್ನೂ ಕೆಲ ಪಾಲಕರು ಮಕ್ಕಳನ್ನು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಕಳಿಸಿರುವ ಮಾಹಿತಿ ನೀಡದೆ, ಎಲ್ಲಿ ಹೋಗಿದ್ದಾರೋ ಎನ್ನುವ ಉತ್ತರ ನೀಡುತ್ತಾರೆ. ಇದು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನು ಮತ್ತೆ ಶಾಲೆಗೆ ತರುವಲ್ಲಿ ದೊಡ್ಡ ಸವಾಲಾಗಿದೆ.

"ತಾಲೂಕಿನಲ್ಲಿ 24 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದು, ಮಕ್ಕಳನ್ನು ಮರು ಶಾಲೆಗೆ ಕರೆತರಲು ಶಿಕ್ಷಕರು, ಇಸಿಒ ಸೇರಿ ಇತರರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಶಾಲೆಗೆ ಬರುವಂತೆ ಮನವೊಲಿಸುತ್ತಿದ್ದೇವೆ. ಒಂದು ವೇಳೆ ಮಗು ಊರಿನಲ್ಲಿ ಇಲ್ಲದೇ ಇದ್ದಾಗ ವಿದ್ಯಾರ್ಥಿಯ ಮನೆಯ ಪಕ್ಕದಲ್ಲಿರುವ ಮನೆಯವರಿಂದ ಮಾಹಿತಿ ಪಡೆದು ಪಂಚನಾಮೆ ಮಾಡುತ್ತಿದ್ದೇವೆ. ಪ್ರತಿದಿನ ಆಯಾ ಶಾಲಾ ವ್ಯಾಪ್ತಿಯ ಶಿಕ್ಷಕರು ವಿದ್ಯಾರ್ಥಿ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ." - ಎಂ.ಎಸ್. ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ "ಶಾಲೆಗೆ ಮಗು ಬರದೇ ಇದ್ದಾಗ ಅಂತಹ ವಿದ್ಯಾರ್ಥಿಯ ಮನೆಗೆ ತೆರಳಿ ಮಾಹಿತಿ ಪಡೆಯುತ್ತೇವೆ. ಒಮ್ಮೊಮ್ಮೆ ಮಕ್ಕಳು ಇರುವ ಕಡೆಯೇ ಹೋಗಿ ಶಾಲೆಗೆ ಕರೆತರುತ್ತಿದ್ದೇವೆ. ಒಂದು ಮಗುವನ್ನು ಶಾಲೆಗೆ ಕರೆ ತರುವ ಕೆಲಸದಿಂದಾಗಿ ಪ್ರತಿದಿನ ಶಾಲೆಗೆ ಬರುವ ಮಕ್ಕಳಿಗೆ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ." - ಹೆಸರು ಹೇಳಲಿಚ್ಛಿಸದ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net