

ಸಿರಗುಪ್ಪ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಅತಿಥಿ ಶಿಕ್ಷಕರ ಸಂಘದಿಂದ ಬುಧವಾರ ಶಾಲೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಿ.ರಾಘವೇಂದ್ರಗೆ ಮನವಿ ಸಲ್ಲಿಸಲಾಯಿತು.
ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ.ಲಿಂಗಾರೆಡ್ಡಿ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ.23, 24 ರಂದು ಶಾಲಾ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟಿಸಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕು.
ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಯಂ ಹುದ್ದೆಗಳು ಬಂದರೆ ಬಿಡುಗಡೆಗೊಳಿಸದೆ ಕರ್ತವ್ಯದಲ್ಲಿ ಮುಂದುವರಿಸಬೇಕು. ಪ್ರತಿ ತಿಂಗಳು ಸರಿಯಾಗಿ ವೇತನ ನೀಡಬೇಕು. ಶೇ.5 ಕೃಪಾಂಕ ನೀಡಬೇಕು. ಕಾಯಂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ವಿಲೀನಗೊಳಿಸಬೇಕು.
ಇಲಾಖೆಯು ನೀಡುವ ವಿವಿಧ ತರಬೇತಿಗಳಿಗೆ ಅವಕಾಶ ಒದಗಿಸಬೇಕು. ಇಎಲ್, ಸಿಎಲ್ ಮಹಿಳೆಯರಿಗೆ ಹೆರಿಗೆಯ ರಜೆಗಳನ್ನು ನೀಡಬೇಕು. ಸಧ್ಯ ಇರುವ ಆದೇಶಗಳಲ್ಲಿ ಮಾರ್ಪಾಡು ಮಾಡಬೇಕು.
ಅತಿಥಿ ಶಿಕ್ಷಕರನ್ನು ಕಾಯಂ ಮಾಡಲು ಸೂಕ್ತ ಕಾನೂನು ರಚಿಸಬೇಕು. ದೆಹಲಿ, ಪಂಜಾಬ್, ಹರಿಯಾಣ ಸರ್ಕಾರಗಳ ಮಾದರಿಯಂತೆ ರಾಜ್ಯದಲ್ಲಿಯೂ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು ಎಂದರು.