

ಅಳವಂಡಿ: ಗ್ರಾಮೀಣ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ. ಇದು ಶಿಕ್ಷಣ ಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ. ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ಕುಂಟಗೇರಿ ಹೇಳಿದರು.
ಇದನ್ನೂ ಓದಿ: ಮಕ್ಕಳಿಗೆ ಪ್ರತಿದಿನವೂ ಆಟಕ್ಕೆ ಸಮಯ ನೀಡಿ…
ಸಮೀಪದ ತಿಗರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಟಾಟಾ ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನದಲ್ಲಿ ಶುಕ್ರವಾರ ಮಾತನಾಡಿದರು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಸಹಕಾರ ಅವಶ್ಯ. ಪಾಲಕರು, ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಹಾಗೂ ದಾನಿಗಳ ಸಹಕಾರ ಪಡೆದು ಶಾಲೆಯ ಅಭಿವೃದ್ಧಿಗೆ ಶ್ರಮಿಸಿ. ಮಕ್ಕಳು ದೇಶದ ಆಸ್ತಿ. ಹೀಗಾಗಿ ಅವರಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಟಾಟಾ ಕಲಿಕಾ ಟ್ರಸ್ಟ್ ಸಂಚಾಲಕ ಮಂಜುನಾಥ ಮಾತನಾಡಿ, ಮಕ್ಕಳ ಮನಸ್ಸು ಮೃದು. ಪ್ರಾಥಮಿಕ ಹಂತದಲ್ಲಿಯೇ ಅವರಿಗೆ ಸಂಸ್ಕಾರ ಹಾಗೂ ಶಿಕ್ಷಣದ ಮಹತ್ವ ತಿಳಿಸಬೇಕು ಎಂದರು.
ಮಕ್ಕಳು ವಿವಿಧ ನಾಯಕರ ವೇಷ ಧರಿಸಿ ಗಮನ ಸೆಳೆದರು. ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಟಾಟಾ ಕಲಿಕಾ ಟ್ರಸ್ಟ್ ಸಂಚಾಲಕ ಮೃತ್ಯಂಜಯ, ಶಿಕ್ಷಕರಾದ ಬಾಬು, ಮಲ್ಲಿಕಾರ್ಜುನ ಯತ್ನಳ್ಳಿ, ನಾಗರಾಜ ನವಲಿ, ಹನುಮಪ್ಪ, ಸಿದ್ದಪ್ಪ, ರೂಪಾ, ಉಮಾ, ಭಾರತಿ, ಅನಿತಾ, ಪ್ರಮುಖರಾದ ಶಿವಲಿಂಗಪ್ಪ, ಮಂಜು, ನಿಂಗಪ್ಪ, ರಾಮಣ್ಣ, ಮಾರುತಿ, ಮಾನಪ್ಪ, ಶರಣಪ್ಪ, ವೀರೇಶ ಇತರರಿದ್ದರು.