

ಚನ್ನಗಿರಿ: ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿ ಸಂಸತ್ ಚುನಾವಣೆ ನಡೆಸಿದರೆ ಮಕ್ಕಳಿಗೆ ಮತದಾನದ ಮಹತ್ವ ತಿಳಿಯಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಚನಾಯಕನಹಳ್ಳಿ ಗ್ರಾಮದ ಬಸವ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶನಿವಾರ ಮಾತನಾಡಿದರು.
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಗಾದೆ ಮಾತಿನಂತೆ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಪ್ರಪಂಚದ ಜ್ಞಾನ ಪಡೆಯಬೇಕು.
ಅವರಿಗೆ ತಿಳಿಯುವುದಿಲ್ಲ, ದೊಡ್ಡವರಾದ ಮೇಲೆ ಕಲಿಯುತ್ತಾರೆ ಎಂದು ಪ್ರತಿ ವಿಷಯದಲ್ಲಿ ಅವರನ್ನು ದೂರ ಇಡುವುದು ಸರಿಯಲ್ಲವೆಂದರು.
ಮತದಾರರು ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗಿ ಅಸಮರ್ಥ ನಾಯಕರನ್ನು ಗೆಲ್ಲಿಸುತ್ತಿದ್ದಾರೆ.
ಚುನಾವಣೆ ಸಮಯದಲ್ಲಿ ಮಾತ್ರ ನೀಡುವ ಮದ್ಯ, ಹಣವನ್ನು ತಿರಸ್ಕರಿಸುವ ಕಾಲ ಬರುವವರೆಗೆ ರಾಜಕೀಯದಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದರು.
ಮುಖ್ಯಶಿಕ್ಷಕ ಸಿ.ಎಸ್. ನಿಜಲಿಂಗಪ್ಪ, ಶಿಕ್ಷಕರಾದ ಕೆ.ಎನ್. ನಿಂಗರಾಜು, ಮಹ್ಮದ್ ಜಿಕ್ರಿಯ, ಚಂದೇಶ್, ನಾಗರಾಜ್, ಸೌಮ್ಯಾ, ರವಿ, ಶಾಲಿನಿ, ಚೇತನ ಇದ್ದರು.