ಅರಸೀಕೆರೆಯಲ್ಲಿ ಶಾಲಾ-ಕಾಲೇಜು ಹಾಜರಾತಿ ವಿರಳ

29arsph1ep
ಕರವೇ ಮುಖಂಡರು ಅರಸೀಕೆರೆ ತಾಲೂಕು ಕಚೇರಿಕೆ ತೆರಳಿ ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಕಿರಣ್‌ಕುಮಾರ್, ಲೋಕೇಶ್, ಮಂಜು, ಸಂತೋಷ್, ನವಾಜ್, ಖಲಂದರ್ ಇತರರಿದ್ದರು.
Published on

ಅರಸೀಕೆರೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದವು.

ರಾಜ್ಯ ರಸ್ತೆ ಸಾರಿಗೆ ಬಸ್, ಆಟೋ, ಕ್ಯಾಬ್, ಟೆಂಪೋ ಟ್ರ್ಯಾವಲ್ಲರ್ ಸೇರಿ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಹೋಟೆಲ್, ದಿನಸಿ ಅಂಗಡಿ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ, ವಹಿವಾಟು ಎಂದಿನಂತೆ ನಡೆದಿತ್ತು. ಸರ್ಕಾರಿ ಕಚೇರಿಗಳ ಸೇವೆ ಅಭಾದಿತವಾಗಿದ್ದರೆ, ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ವಿರಳವಾಗಿತ್ತು.

ಜಯಕರ್ನಾಟಕ ಸಂಘಟನೆ, ರೈತ ಸಂಘದ ಮುಖಂಡರು ರಾಷ್ಟ್ರೀಯ ಹೆದ್ದಾರಿ, ಹಾಸನ ರಸ್ತೆ, ಸಾಯಿನಾಥ ರಸ್ತೆ ಒಳಗೊಂಡಂತೆ ವಿವಿಧೆಡೆ ಬೈಕ್ ರ‌್ಯಾಲಿ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಕೆಲಕಾಲ ಧರಣಿ ಕುಳಿತಿದ್ದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಕರವೇ ನಗರಾಧ್ಯಕ್ಷ ಕಿರಣ್‌ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ರಜೆ ಘೋಷಿಸಿರುವ ಶಾಲೆಗಳಿಗೆ ನೋಟಿಸ್ ನೀಡುವುದಾಗಿ ಬಿಇಒ ಮೋಹನ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸ್ಥಳೀಯ ಜೆಡಿಎಸ್, ಬಿಜೆಪಿ ಪ್ರಮುಖರು ಬಂದ್‌ನಿಂದ ದೂರ ಉಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net