

ಸರಗೂರು: ಶಾಲಾ ದಿನಗಳಿಂದ ಮಕ್ಕಳಿಗೆ ಕಾನೂನಿನ ತಿಳಿವಳಿಕೆ ನೀಡಿದರೆ ದೇಶ ಸುಭಿಕ್ಷವಾಗಲಿದೆ ಎಂದು ಸರಗೂರು ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸನ್ನಡತೆಯನ್ನು ಕಲಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರದ್ದಾಗಿರುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಶಾಲಾ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಮರೆಯಾಗುತ್ತಿದೆ. ಶಾಲೆಗಳು ಭವಿಷ್ಯವನ್ನು ರೂಪಿಸುವ ಕಾರ್ಖಾನೆಗಳಾಗಿದ್ದು, ಶಿಕ್ಷಕರು ಸೂಕ್ಷ್ಮತೆಯಿಂದ ಕೆಲಸ ನಿರ್ವಹಿಸಬೇಕೆಂದರು.
ಉಪ ನಿರೀಕ್ಷಕ ಆರ್.ಕಿರಣ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಯಾರೊಬ್ಬರೂ ಅಪರಾಧದ ನಂಟು ಹೊಂದದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದೆ. ಶಿಕ್ಷಕರು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕಾನೂನು ಸಲಹೆ ನೀಡುವ ಮೂಲಕ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದರು .
ಲಯನ್ಸ್ ಅಕಾಡೆಮಿ ಶಾಲೆಯ ಮುಖ್ಯ ಶಿಕ್ಷಕ ಬಿ.ಡಿ.ದಾಸಾಚಾರ್, ಪ್ರಗತಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಸುರೇಶ್, ಜಯಕುಮಾರ್, ಜೆಎಸ್‌ಎಸ್ ವಿವೇಕ ಶಾಲೆ ಸೇರಿದಂತೆ ವಿವಿಧ ಶಾಲೆಯ ಉಪನ್ಯಾಸಕರು ಇದ್ದರು.