ಶಾಲೆಗೆ ಹೋಗಲು ಇನ್ನಷ್ಟು ಬಸ್ ಬಿಡಿ

School, Bus, Student, ABVP,
Published on

ಚಿತ್ರದುರ್ಗ: ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು, ನೂರಾರು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಡಿಸಿ ಕಚೇರಿ ಬಳಿ ಜಮಾಯಿಸಿದ ವಿದ್ಯಾರ್ಥಿಗಳು, ಸಾರಿಗೆ ಸಮಸ್ಯೆ ಬಗೆಹರಿಸಲು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಉಂಟಾಗಿದೆ.

ಇದರಿಂದಾಗಿ ಶಾಲಾ-ಕಾಲೇಜುಗಳಿಗೆ ಹೋಗುವಂತ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಬಸ್‌ಗಳಲ್ಲಿ ಮಿತಿಮೀರಿದ ಪ್ರಯಾಣಿಕರು ಸಂಚರಿಸುತ್ತಿರುವ ಕಾರಣ ಈಚೆಗೆ ಹಾವೇರಿಯಲ್ಲಿ ಬಸ್ ಏರಲು ಹೋದ ವಿದ್ಯಾರ್ಥಿನಿಗೆ ಅಪಘಾತವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಕ್ಕೆ ಬರುವ ಅನೇಕ ವಿದ್ಯಾರ್ಥಿಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

ಈ ಮಾರ್ಗಗಳಲ್ಲಿ ಹೆಚ್ಚಿನ ಬಸ್ ಸಂಚಾರ ಇರುವುದಿಲ್ಲ. ಪರೀಕ್ಷಾ ಸಮಯದಲ್ಲಿ ತೊಂದರೆಯಾದರೆ ಭವಿಷ್ಯಕ್ಕೂ ಧಕ್ಕೆ ಆಗಲಿದೆ ಎಂದು ಹೇಳಿದರು.

ಎಬಿವಿಪಿ ನಗರ ಕಾರ್ಯದರ್ಶಿ ಗೋಪಿ, ಸಹ ಕಾರ್ಯದರ್ಶಿ ಭಾರ್ಗವ, ಪದಾಧಿಕಾರಿಗಳಾದ ಮನೋಜ್, ಕನಕರಾಜ್, ಚಿತ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net