

ಹನೂರು: ಉಡುತೊರೆ ಜಲಾಶಯದಿಂದ ರೈತರಿಗೆ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶದಿಂದ ಯೋಜನೆ ಸಿದ್ಧಪಡಿಸಲಾಗಿದ್ದು, ಈ ಸಂಬಂಧ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯಕ್ಕೆ ಗುರುವಾರ ಭೇಟಿ ನೀಡಿ ನಾಲೆ ಹಾಗೂ ನೀರು ಪೂರೈಕೆಯಾಗುವ ಗೇಟ್ ಪರಿಶೀಲಿಸಿ ಮಾತನಾಡಿದರು.
ಉಡುತೊರೆ ಜಲಾಶಯ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತದೆ. ಆದರೆ, ಕಳೆದ ಹಲವು ವರ್ಷಗಳಿಂದ ನಾಲೆಗಳಲ್ಲಿ ಹೂಳೆತ್ತದ ಪರಿಣಾಮ ದುರಸ್ತಿಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ಇದರಿಂದ ಈ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರಾವರಿ ಸೌಕರ್ಯ ದೊರಕುತ್ತಿರಲಿಲ್ಲ. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ 2 ತಿಂಗಳ ಹಿಂದೆ ಜಲಾಶಯ ಹಾಗೂ ನಾಲೆಗಳಿಗೆ ಭೇಟಿ ನೀಡಿ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಹಾಗೂ ನಾಲೆಗಳು ಸುಸ್ಥಿಯಲ್ಲಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸಮರ್ಪಕ ನೀರಾವರಿ ಸೌಕರ್ಯ ಒದಗಿಸಲು ಯೋಜನೆ ಸಿದ್ಧಪಡಿಸಿದ್ದು, ನೀರಾವರಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಮುಖಂಡರಾದ ಚಿನ್ನವೆಂಕಟ, ಬಾಬು, ಮುಸ್ತಫ್, ಮಾದೇಶ್, ವಿಜಯಕುಮಾರ್, ಡಿ.ಕೆ. ರಾಜು, ಅಥಿಕ್, ಶಿವರುದ್ರ, ಮಹದೇವ, ಸುರೇಶ್ ಇತರರು ಇದ್ದರು.