ಪರಿಶಿಷ್ಟರ ಸೌಲಭ್ಯಗಳು ಇತರರ ಪಾಲು

1
ಗೌರಿಬಿದನೂರಿನಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಮಸ್ಯೆ ಆಲಿಸಿದರು. ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮತ್ತಿತರರ ಅಧಿಕಾರಿಗಳು ಇದ್ದರು.
Published on

ಅಧಿಕಾರಿಗಳ ವಿರುದ್ಧ ದಲಿತ ಮುಖಂಡರ ಆಕ್ರೋಶ -ಶಾಸಕರ ಸಮ್ಮುಖದಲ್ಲಿ ಅಸಮಾಧಾನ

ಗೌರಿಬಿದನೂರು: ಸಕಾಲಕ್ಕೆ ಸಭೆ ಕರೆಯದಿರುವುದು, ಅನುದಾನ ಸದ್ಬಳಕೆ ಮಾಡದಿರುವುದು ಹಾಗೂ ಸಭೆಯ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ದಲಿತ ಮುಖಂಡರು ಶಾಸಕರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಮುಖಂಡ ಹನುಮಂತ ನಾಯಕ್, ತರಾತುರಿಯಲ್ಲಿ ಸಭೆ ಕರೆಯಲಾಗಿದೆ. ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಾಲಾವಕಾಶ ನೀಡಬೇಕಾಗಿತ್ತು. ಸಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮುಂದಿನ ಬಾರಿ ಈ ರೀತಿ ಆಗದಂತೆ 15 ದಿನ ಮುಂಚಿತವಾಗಿಯೇ ಮಾಹಿತಿ ನೀಡಲಾಗುವುದು. 20 ದಿನಗಳ ನಂತರ ಮತ್ತೊಂದು ಸಭೆ ಕರೆಯುವುದಾಗಿ ಹೇಳಿದರು.

ವಕೀಲ ನರಸಿಂಹಮೂರ್ತಿ ಮಾತನಾಡಿ, 1993ರಿಂದ ತಾಲೂಕು ಪಂಚಾಯಿತಿಯಲ್ಲಿ ಖಾತೆ 3ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಬರುವ ಅನುದಾನ ಬಳಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಿ: ಮುಖಂಡ ಗಂಗಾಧರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ಮಶಾನಗಳ ರಸ್ತೆ ಒತ್ತುವರಿ, ದಲಿತರ ಮೇಲಿನ ದೌರ್ಜನ್ಯಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡಬೇಕು ಎಂದರು.

ಸೌಲಭ್ಯಗಳು ಒಂದೇ ಸಮುದಾಯದ ಪಾಲು: ಮುಖಂಡ ಗಂಗಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಂಬೇಡ್ಕರ್ ಸಮುದಾಯ ಭವನಗಳು ಬಳಕೆಗೆ ಬಾರದೆ ವ್ಯರ್ಥವಾಗುತ್ತಿವೆ. ಗಿಡಗಂಟಿಗಳು ಬೆಳೆದು ಅಕ್ರಮ ಚಟುವಟಿಕೆಗಳ ತಾಣಗಳಾಗುತ್ತಿವೆ. ಭವನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸವಲತ್ತುಗಳು ಒಂದೇ ಸಮುದಾಯದವರ ಪಾಲಾಗುತ್ತಿವೆ ಎಂದು ದೂರಿದರು.

ವೃತ್ತ ನಿರೀಕ್ಷಕ ಸತ್ಯನಾರಾಯಣ್ ಮಾತನಾಡಿ, ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟಿಲ್ಲ. ಆ ರೀತಿ ಇದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ. ಇಲ್ಲವೇ ಸಾಕ್ಷಿ ನೀಡಿದರೆ ಕ್ರಮ ಜರುಗಿಸಲಾಗುವುದು ಎಂದರು.

ಬಡವರಿಗೆ ನಿವೇಶನ: ಸರ್ಕಾರ ಜನವರಿ ಫೆಬ್ರವರಿಯಲ್ಲಿ ಬಡವರಿಗೆ ನಿವೇಶನ ಯೋಜನೆಗಳನ್ನು ಜಾರಿಗೆ ತರುವ ಸಂಭವವಿದೆ. ತಾಲೂಕಿನಲ್ಲಿ ಲಭ್ಯವಿರುವ ಜಾಗಗಳ ಬಗ್ಗೆ ತಹಸೀಲ್ದಾರಿಂದ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾದಲವೇಣಿ,, ಬರ್ಜಾನಕುಂಟೆ, ಸಾಗನಹಳ್ಳಿಗಳಲ್ಲಿ ಸರ್ಕಾರಿ ಜಮೀನು ಗುರುತಿಸಲಾಗಿದೆ ಎಂದು ಶಾಸಕ ತಿಳಿಸಿದರು.

ಮುಖಂಡ ಆರ್.ಅಶೋಕ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಪಂಗಡದ ವಸತಿ ನಿಲಯಗಳಿಗೆ ಶಾಸಕರು ಭೇಟಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಚರ್ಚಿಸಬೇಕು, ಪಾಲಕರ ಸಭೆ ನಡೆಸಬೇಕು. ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ಕೊಡಿಸಬೇಕು. ಶೋಷಿತ ಸಮುದಾಯದ ಸವಲತ್ತುಗಳು ಇತರ ಸಮುದಾಯಗಳ ಪಾಲಾಗದಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಫರೀದ್, ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ, ನಗರಸಭೆ ಪೌರಾಯುಕ್ತೆ ಡಿ.ಎಂ. ಗೀತಾ, ಬಿಇಒ ಶ್ರೀನಿವಾಸ್ ಮೂರ್ತಿ ಹಾಜರಿದ್ದರು.

ಪಡಿತರ ಕಾರ್ಡ್, ಹೆಂಡ ಅಕ್ರಮ ಮಾರಾಟ

ಇಡುಗೂರು ಸೋಮಯ್ಯ ಮಾತನಾಡಿ, ತಾಲೂಕಿನಲ್ಲಿ 500 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಈಗ ಮತ್ತೊಮ್ಮೆ ಅರ್ಜಿ ಹಾಕಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವುದೇ ಮಾಹಿತಿ ನೀಡದೆ ಕಾರ್ಡ್ ರದ್ದುಪಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಗಡಿಭಾಗದಲ್ಲಿ ಆಂಧ್ರದಿಂದ ಹೆಂಡ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಪೊಲೀಸರು ಶಾಮೀಲಾಗಿರುವ ಶಂಕೆಯಿದೆ. ಮದ್ಯ ಮಾರಾಟಗಾರರನ್ನು ಬಂಧನದಲ್ಲಿರಿಸಿಕೊಂಡು ಬಿಡುಗಡೆಗೆ ₹25 ಸಾವಿರಕ್ಕೆ ಲಂಚ ಕೇಳಿದ್ದಾರೆ ಎಂದು ಆರೋಪಿಸಿದರು.

ಪ್ರತಿಮೆ ನಿರ್ಮಾಣಕ್ಕೆ ಬದ್ಧ

ಶಾಸಕ ಪುಟ್ಟಸ್ವಾಮಿಗೌಡ ಮಧ್ಯಪ್ರವೇಶಸಿ, ನಿಯಮಾನುಸಾರ ಅರ್ಹರಿಗೆ ಸರ್ಕಾರಿ ಸೌಲಭ್ಯಗಳು ತಲುಪಬೇಕು. ಈ ನಿಟ್ಟಿನಲ್ಲಿ ಕೇವಲ ಅಧಿಕಾರಿಗಳನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ದಲಿತ ಮುಖಂಡರು ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು. ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬದ್ಧವಾಗಿದ್ದೇನೆ. ಈ ವಿಚಾರ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರತಿಮೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದರು.

ಖಾಸಗಿ ಶಾಲೆ ಸ್ಥಳಾಂತರಕ್ಕೆ ಆಗ್ರಹ

ಮುಖಂಡ ಜೆ.ಕೆ. ಗಂಗಾಧರ್ ಮಾತನಾಡಿ, ನಗರದರಲ್ಲಿ ಪುರಸಭೆ ನಿರ್ಮಿಸಿರುವ ಆಶ್ರಯ ಬಡಾವಣೆಯಲ್ಲಿ ಖಾಸಗಿ ಶಾಲೆಯಿಂದ ಹೊಂಡುಬೀಡು ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಜನವಸತಿ ಪ್ರದೇಶದಲ್ಲಿ ಶಾಲೆ ನಿರ್ಮಿಸಲಾಗಿದೆ. ಮಕ್ಕಳಿಗೆ ಆಟದ ಮೈದಾನವಿಲ್ಲ. ಸರ್ಕಾರಿ ಜಾಗವನ್ನೇ ಮೈದಾನ ಮಾಡಿಕೊಂಡಿದ್ದಾರೆ. ಮೂಲಸೌಲಭ್ಯ ಕಲ್ಪಿಸದೆ ಪುರಸಭೆ ನಿರ್ಮಿಸಿರುವ ಮಕ್ಕಳ ಪಾರ್ಕ್ ಅನ್ನು ಒತ್ತುವರಿ ಮಾಡಿಕೊಂಡಿದೆ. ಶಾಲೆ ವಾಹನಗಳ ಸಂಚಾರದಿಂದ ವಾಯು ಹಾಗೂ ಶಬ್ದ ಮಾಲಿನ್ಯವಾಗುತ್ತಿದೆ. ಆದ್ದರಿಂದ ಶಾಲೆಯನ್ನು ಸ್ಥಳಾಂತರಿಸಬೇಕು. ಒತ್ತುವರಿ ಜಾಗವನ್ನು ತೆರವುಗೊಳಿಸಿ ಬಡವರಿಗೆ ನೀಡಬೇಕು. ಇಲ್ಲವೇ ಆ ಜಾಗದಲ್ಲಿ ಬಾಬು ಜಗಜೀವನ್‌ರಾಂ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸ್ಥಳ ಪರಿಶೀಲಿಸಲಾಗಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net