‘ಮಳೆಯ ಚೆಲ್ಲಾಟ’ ರೈತರಿಗೆ ಪ್ರಾಣ ಸಂಕಟ

farmersuicide-06-1499326418
Published on

ತಲೆ ನೋವಾಗಿ ಪರಿಣಮಿಸಿದ ಹವಾಮಾನ ವೈಪರೀತ್ಯ ಕುಂಠಿತಗೊಂಡ ಬಿತ್ತನೆ



ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಕೃಷಿ ಚಟುವಟಿಕೆ ಮತ್ತಷ್ಟು ಬಿರುಸಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆ ಹೊಂದಿದ್ದು, ಆದರೆ ಹವಾಮಾನ ವೈಪರೀತ್ಯ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ನಾಲ್ಕು ವರ್ಷಗಳ ಪೈಕಿ 2023 ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಿ ವಾರ್ಷಿಕ ವಾಡಿಕೆಗಿಂತಲೂ ಹೆಚ್ಚಿಗೆ ಮಳೆ ಸುರಿದಿದೆ. ಈ ಬಾರಿಯೂ ಮುಂಗಾರು ಪ್ರಾರಂಭದಲ್ಲಿ ಉತ್ತಮ ಆರ್ಭಟ ಕಂಡು ಬಂದಿದ್ದರಿಂದ ಭೂ ಹದ ಕಾರ್ಯ ಚೆನ್ನಾಗಿ ನಡೆದಿತ್ತು. ಆದರೆ, ಬಿತ್ತನೆ ಹಂತದಲ್ಲಿ ಮಳೆ ಕೈ ಕೊಟ್ಟಿದ್ದು, ಮುಂಬರುವ ದಿನಗಳಲ್ಲಾದರೂ ವರುಣರಾಯ ಕೃಪೆ ತೋರಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಭಾಗವು ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಹೊಂದಿಲ್ಲ. ಮಳೆ ಮತ್ತು ಕೊಳವೆ ಬಾವಿಗಳನ್ನಾಶ್ರಯಿಸಿ ಕೃಷಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಹೂವು, ತರಕಾರಿ, ರೇಷ್ಮೆ ಬೆಳೆಯುವುದರಲ್ಲಿ ಇಲ್ಲಿನ ರೈತರು ಮುಂಚೂಣಿಯಲ್ಲಿದ್ದಾರೆ.


ಅಂಕಿ ಅಂಶಗಳಲ್ಲಷ್ಟೇ ಸಾಧನೆ
ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆಯ ವರದಿಯು ಅಂಕಿ ಅಂಶಗಳಲ್ಲಿ ಮಾತ್ರ ಕಂಡು ಬರುತ್ತಿದೆ. ಆದರೆ, ಅಲ್ಲಲ್ಲಿ ನೀರಿನ ಅಭಾವದಿಂದ ಕೃಷಿ ಬೆಳೆಗಳು ಹಾಳಾಗುವುದು, ಇಳುವರಿ ಪ್ರಮಾಣ ಕುಸಿತ ಸೇರಿ ನಾನಾ ಸಮಸ್ಯೆಗಳು ಪ್ರತಿ ವರ್ಷ ರೈತರನ್ನು ಕಾಡುತ್ತಿವೆ. ಕಳೆದ ವರ್ಷ ಜಿಲ್ಲೆಯನ್ನು ಬರ ಆವರಿಸಿತ್ತು. 75 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ಇದರಿಂದ ಚೇತರಿಸಿಕೊಂಡು ಈ ಬಾರಿಯ ಮುಂಗಾರಿಗೆ ರೈತರು ಸಜ್ಜಾಗಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದು, ವರುಣರಾಯನ ಚೆಲ್ಲಾಟವು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ 763.4 ಮಿ.ಮೀ. ಕಳೆದ 2020ರಲ್ಲಿ 977.7 ಮಿ.ಮೀ, 2021ರಲ್ಲಿ 1313.3 ಮಿ.ಮೀ, 2022ರಲ್ಲಿ 1120.7 ಮಿ.ಮೀ ಮಳೆಯಾಗಿದೆ ಎನ್ನುವುದು ಕೃಷಿ ಇಲಾಖೆಯ ವರದಿಯಿಂದ ತಿಳಿದು ಬಂದಿದೆ. 2024ರಲ್ಲಿ (ಜು.26 ಕ್ಕೆ) 242.2 ಮಿಮೀ ಮಳೆಯಾಗಬೇಕಾಗಿತ್ತು. ಈಗಾಗಲೇ 268.2 ಮಿ.ಮೀ ಮಳೆ ಸುರಿದಿದೆ ಎಂದೇಳಲಾಗುತ್ತಿದೆ. ಆದರೆ, ಇಷ್ಟು ಪ್ರಮಾಣದ ಮಳೆ ನಡುವೆಯೂ ಬಿತ್ತನೆ ಚಟುವಟಿಕೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಸಾಧನೆ ಮಾತ್ರ ಕಂಡು ಬಂದಿಲ್ಲ. 1.28 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು ಶೇ.56 ರಷ್ಟು ಸಾಧನೆಯಾಗಿದೆ. ಆಗಸ್ಟ್‌ನಲ್ಲಿ ಉತ್ತಮ ಮಳೆ ಬೀಳದಿದ್ದಲ್ಲಿ ನಾನಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಆತಂಕದ ಮಾತುಗಳು ಕೇಳಿ ಬರುತ್ತಿವೆ.


ಮಳೆಗಾಲದಲ್ಲೂ ಸಮಸ್ಯೆ
ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲೂ ಅಂತರ್ಜಲ ಮಟ್ಟ ಕುಸಿತಗೊಂಡಿರುವುದು ಪರೀಕ್ಷಾ ವರದಿಯಿಂದ ತಿಳಿದು ಬಂದಿದೆ. ಮತ್ತೊಂದೆಡೆ 35 ಗ್ರಾಪಂಗಳ ವ್ಯಾಪ್ತಿಯ 46 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕೆ 39 ಕಡೆ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. 25 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಸಮಸ್ಯೆಯನ್ನು ನಿಯಂತ್ರಿಸಲಾಗುತ್ತಿದೆ.


ಜುಲೈನಲ್ಲಿ ಕಡಿಮೆ ಮಳೆ
ಈ ಭಾಗದಲ್ಲಿ ಮುಂಗಾರು ಪೂರ್ವ ಮತ್ತು ಪ್ರಾರಂಭದ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಬಿತ್ತನೆ ಕಾರ್ಯನಿರ್ವಹಣೆಯ ಹಂತದಲ್ಲಿ ಸಮಸ್ಯೆ ಕಾಡಿದೆ. ಆಗಸ್ಟ್‌ನಲ್ಲೂ ಅಭಾವ ಕಂಡು ಬಂದರೆ ದೊಡ್ಡ ಸಂಕಷ್ಟವನ್ನು ಎದುರಿಸಬೇಕಿದ್ದು, ಬಳಿಕ ಹಿಂಗಾರು ಮೊರೆ ಹೋಗಬೇಕಾಗುತ್ತದೆ ಎನ್ನಲಾಗುತ್ತಿದೆ. ಜುಲೈನಲ್ಲಿ 69.3 ಮಿಮೀ ಮಳೆಯ ನಿರೀಕ್ಷೆ ಹೊಂದಿದ್ದು, 47.2 ಮಿಮೀ ಮಳೆಯಾಗಿದೆ. ಕಳೆದ ಬರದ ವರ್ಷ2023 ರಲ್ಲಿ 58.8 ಮಿಮೀ ಸುರಿದಿತ್ತು.


ಮಳೆ ಕೈ ಕೊಟ್ಟಿದ್ದೇ ಹೆಚ್ಚು
ಜಿಲ್ಲೆಯಲ್ಲಿ ಕೃಷಿ ಬೆಳೆಗಳ ಸಾಗುವಳಿ ವಿಸ್ತೀರ್ಣವು 1,43,421 ಹೆ.ಪ್ರದೇಶ. ಮಳೆಯ ಅಭಾವ ಮತ್ತು ಕಳೆದ ಸಾಲಿನಲ್ಲಿ ಕಾಡಿದ ಬರದಿಂದ ಉಂಟಾದ ಸಂಕಷ್ಟದ ಹಿನ್ನೆಲೆಯಲ್ಲಿ ಬಿತ್ತನೆ ಗುರಿಯನ್ನು ಈ ಬಾರಿ ಇಳಿಸಲಾಗಿದೆ. ಇಲ್ಲಿ ಖುಷ್ಕಿ 1,19,407 ಹೆ.ಪ್ರದೇಶ ಮತ್ತು ನೀರಾವರಿ 8768 ಹೆ.ಪ್ರದೇಶ ಸೇರಿ 1.28 ಲಕ್ಷ ಹೆ.ಪ್ರದೇಶದಲ್ಲಿ ಮುಂಗಾರು ಅವಧಿಗೆ ಬಿತ್ತನೆ ಕಾರ್ಯದ ನಿರೀಕ್ಷೆ ಹೊಂದಲಾಗಿದೆ. ಆದರೆ, ಈ ಭಾಗದಲ್ಲಿ ಆಲಿಕಲ್ಲು, ಬಿರುಗಾಳಿ ಸಮೇತ ಮಳೆ ಇಲ್ಲವೇ ತೀವ್ರ ಮಳೆಯ ಅಭಾವಕ್ಕೆ ಬೆಳೆಗಳು ಹಾಳಾಗಿರುವ ಸಂದರ್ಭಗಳೇ ಹೆಚ್ಚು.

ತಾಲೂಕುವಾರು ಮಳೆ ಪ್ರಮಾಣ
ತಾಲೂಕು ವಾಡಿಕೆ ಮಳೆ 2020 2021 2022 2023
ಬಾಗೇಪಲ್ಲಿ 695 881.4 1121 957.7 559.7
ಚಿಕ್ಕಬಳ್ಳಾಪುರ 828.4 977 1311.1 1250.6 596.4
ಚಿಂತಾಮಣಿ 786.9 991.8 1310.6 1010.6 618.5
ಗೌರಿಬಿದನೂರು 703.9 1015.7 1331.1 1369.9 548.4
ಗುಡಿಬಂಡೆ 693.7 889.7 1180.7 119.6 541.1
ಶಿಡ್ಲಘಟ್ಟ 763.4 977.7 1313.3 1120.7 582.7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net