

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ನೈಸರ್ಗಿಕತೆಗೆ ಹೆಸರಾದ ಸ್ಕ್ಯಾಂಡಿನೇವಿಯನ್ ಒಳಾಂಗಣ ವಿನ್ಯಾಸದತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೊಂದಲಮುಕ್ತ ವಿನ್ಯಾಸವಾಗಿದ್ದು, ಕಟ್ಟಡದ ಒಳಗೆ ನೈಸರ್ಗಿಕ ಗಾಳಿ, ಬೆಳಕು ಮೂಡಿಸುತ್ತದೆ. ಇದು ಅನಗತ್ಯವಾದ ಅಸ್ತವ್ಯಸ್ತತೆ ಇಲ್ಲದಂತೆ ಮನೆಯ ಅಲಂಕಾರದಲ್ಲಿ ಸರಳ ಸೌಂದರ್ಯವನ್ನು ಕೇಂದ್ರೀಕರಿಸುತ್ತದೆ. ಮನೆ ಮಾತ್ರವಲ್ಲದೆ, ಪೀಠೋಪಕರಣಗಳ ಶೋರೂಂ ಸೇರಿ ವಾಣಿಜ್ಯ ಮಳಿಗೆಗಳಲ್ಲೂ ಈ ವಿನ್ಯಾಸ ಮಹತ್ವ ಪಡೆದುಕೊಂಡಿದೆ.
ಸರಳತೆ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವವರು ಬಹುತೇಕರು ಸ್ಕ್ಯಾಂಡಿನೇವಿಯನ್ ವಿನ್ಯಾಸ ಆಯ್ಕೆ ಮಾಡಿಕೊಳ್ಳತ್ತಾರೆ. ಈ ವಿನ್ಯಾಸ ತನ್ನದೇ ಆದ ಇತಿಹಾಸ ಹೊಂದಿದ್ದು, ನಾರ್ವೆ, ಡೆನ್ಮಾರ್ಕ್ ಮತ್ತು ಸ್ವೀಡನ್‌ನ ನಾರ್ಡಿಕ್ ದೇಶಗಳಲ್ಲಿ 1930ರಲ್ಲಿ ಕಾರ್ಯರೂಪಕ್ಕೆ ಬಂದ ಈ ವಿನ್ಯಾಸ ಕುರಿತಾದ ಚಳವಳಿಯೂ ನಡೆದಿದೆ. 1950ರ ವೇಳೆಗೆ ಇದರ ವಿನ್ಯಾಸಕಾರರನ್ನು ಗುರುತಿಸಿ ಅತ್ಯುತ್ತಮ ಪ್ರಶಸ್ತಿ ನೀಡುವ ಪರಂಪರೆ ಆರಂಭವಾಯಿತು. ನಂತರದಲ್ಲಿ ಅದು ಒಳಾಂಗಣ ವಿನ್ಯಾಸದಲ್ಲಿ ಸ್ಥಾನ ಪಡೆದು ಜಾಗತಿಕವಾಗಿ ಜನಪ್ರಿಯವಾಯಿತು.
ಸರಳತೆ, ಕ್ರಿಯಾತ್ಮಕತೆಗೆ ಆದ್ಯತೆ:
ಸರಳತೆಯ ಜತೆಗೆ ಕ್ರಿಯಾತ್ಮಕತೆಯ ಮೇಲೆ ಹೆಚ್ಚಿನ ಗಮನಹರಿಸುವ ಸ್ಕ್ಯಾಂಡಿನೇವಿಯನ್ ವಿನ್ಯಾಸ ಶೈಲಿಯು ಪುರಾತನವಾದರೂ ಆಧುನಿಕತೆಯಗೂ ಹೊಂದಿಕೊಂಡಿತು. ಈ ವಿನ್ಯಾಸ ಹೆಚ್ಚು ಸುಸ್ಥಿರ ಮತ್ತು ಪರಸ್ಪರ ಸಾಮರಸ್ಯದಿಂದ ಕೂಡಿದೆ. ವಾಸಸ್ಥಳ ಹಾಗೂ ಕೆಲಸದ ಸ್ಥಳ ಎರಡಕ್ಕೂ ಹೊಂದಿಕೊಳ್ಳುವ ಈ ವಿನ್ಯಾಸ ಸರಳತೆ ಬಯಸುವವರಿಗೆ ಬಹಳ ಒಗ್ಗಿಕೊಳ್ಳುತ್ತದೆ. ಯಾವುದೇ ಆಡಂಬರ ಬಯಸದೆ ಸಂತೋಷವಾಗಿರಲು ಈ ವಿನ್ಯಾಸ ಪೂರಕವಾಗಿದೆ. ಕ್ರಿಯಾತ್ಮಕತೆಗೆ ಹೆಚ್ಚು ಆದ್ಯತೆ ನೀಡುತ್ತದೆ.
ಸಾವಯವ ವಸ್ತುಗಳಿಗೆ ಒತ್ತು:
ಇದು ಒಂದು ರೀತಿ ಸಾವಯವ ವಸ್ತುವಿನಂತೆ, ಆಕಾರಗಳಿಗೆ, ನೈಸರ್ಗಿಕ ವಸ್ತುಗಳು ಆರಾಮದಾಯಕ ವಿನ್ಯಾಸ ನೀಡುತ್ತದೆ. ಇದೊಂದು ರೀತಿ ಗ್ರಾಮೀಣ ಸಂಸ್ಕೃತಿಯನ್ನು ಹೋಲುತ್ತದೆ. ಮನೆಯ ಒಳಗೆ ಬಾಗಿಲು, ಕಿಟಕಿಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಾಳಿ- ಬೆಳಕು ಪೂರೈಕೆಯಾಗುವಂತೆ ಇದರ ವಿನ್ಯಾಸ ಇರಲಿದೆ. ಜತೆಗೆ ಪೀಠೋಪಕರಣಗಳು ಪ್ರಕೃತಿ ಪ್ರೇರಕವಾಗಿರುತ್ತವೆ. ಅಂದರೆ ಬಿದಿರಿನ ಕಡ್ಡಿಗಳು, ಮರದ ಬುಡಗಳನ್ನೇ ವಸ್ತುಗಳನ್ನಾಗಿ ಬಳಸುವುದು. ಇದು ಕೈಯಿಂದ ಮಾಡಿದ ಸುಸ್ಥಿರ ಉತ್ಪನ್ನಗಳನ್ನು ಮನೆ ವಿನ್ಯಾಸಗಳಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಜತೆಗೆ ಅನಗತ್ಯ ಬಣ್ಣಗಳನ್ನು ದೂರವಿಟ್ಟು ಗೋಡೆಗಳಿಗೆ ಬಿಳಿ ಬಣ್ಣ ಆಯ್ಕೆ ಮಾಡಲಾಗುತ್ತದೆ. ಇದು ಶಾಂತಿಯ ಸಂಕೇತವೂ ಆಗಿದೆ. ಗೋಡೆಗಳಿಗೆ ಪ್ರಾಣಿಗಳ ಕೊಂಬುಗಳಿಂದ ಮಾಡಿದ ವಸ್ತುಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ಕುರಿ ಚರ್ಮದ ರಗ್, ಐಷಾರಾಮಿ ಚರ್ಮದ ಸೋಫಾ ಹೀಗೆ ವಿನ್ಯಾಸದಲ್ಲಿ ಪ್ರತಿ ವಸ್ತುವೂ ಪರಿಸರಕ್ಕೆ ಪೂರಕವಾಗಿರುತ್ತದೆ.