

ಚಳ್ಳಕೆರೆ: ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಅರ್ಹ ಫಲಾನುಭವಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ-ಸೌಲಭ್ಯ ವಿತರಿಸುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ಶನಿವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೇಲ್ವಿಚಾರಣೆ ಮತ್ತು ಬಲವರ್ಧನಾ ಸಮಿತಿ, ಚಲವಾದಿ ಮಹಾಸಭಾ ಪದಾಧಿಕಾರಿಗಳು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
2020-21ನೇ ಸಾಲಿನಲ್ಲಿ ಅಂಬೇಡ್ಕರ್ ನಿಗಮಕ್ಕೆ ರತ್ನಮ್ಮ ಅರ್ಜಿ ಹಾಕಿದ್ದರು. ಪರಿಶೀಲನೆ ಬಳಿಕ ಸಾಲ-ಸೌಲಭ್ಯ ನೀಡಲು ಸ್ಥಳೀಯ ಬ್ಯಾಂಕಿಗೆ 4 ಲಕ್ಷ ಮಂಜೂರಾತಿಗೆ ಸೂಚಿಸಲಾಗಿತ್ತು. ಆದರೆ, ಮ್ಯಾನೇಜರ್ ಬಂದಿಲ್ಲ. ವರ್ಗಾವಣೆ ಆಗಿದ್ದಾರೆ ಎನ್ನುವ ಸಬೂಬು ಹೇಳಿ ಅಲೆದಾಡಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಡಕುಟುಂಬಗಳ ಸಬಲೀಕರಣಕ್ಕೆ ನಿಗಮಗಳು ಜಾರಿ ಮಾಡಿರುವ ಯೋಜನೆಗಳು ಕೈಗೆ ಸಿಗುತ್ತಿಲ್ಲ. ಸರ್ಕಾರದ ಹಂತದಲ್ಲಿ ಆದೇಶ ಮಾಡಿದರೂ, ಬ್ಯಾಂಕುಗಳಿಂದ ಸೌಲಭ್ಯ ಜಾರಿ ಆಗುತ್ತಿಲ್ಲ. ಎಸ್ಸಿ-ಎಸ್ಟಿ ಫಲಾನುಭವಿಗಳನ್ನು ನಿರ್ಲಕ್ಷಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಘಟನೆಯ ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಪಿ.ಮಹದೇವಪುರ ಕುಶ, ಎನ್.ನಿಜಲಿಂಗಪ್ಪ, ಓಂಕಾರಮೂರ್ತಿ, ನರಸಿಂಹಮೂರ್ತಿ, ಚಿಕ್ಕಣ್ಣ ಇತರರಿದ್ದರು.