

ಕಾರವಾರ:ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣಪತ್ರ ಪಡೆದವರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರ ಜಯಘೋಷ ಕೂಗಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಜಾತಿಯವರು ಮೊಗೇರ ಹಾಗೂ ಗೊಂಡ ಜಾತಿ ಪ್ರಮಾಣಪತ್ರ ಪಡೆದಿದ್ದು, ಅವರಿಗೆ ಸರ್ಕಾರಿ ಹುದ್ದೆ ನೀಡಿ, ವೇತನ ಭಡ್ತಿಯನ್ನು ನೀಡಲಾಗುತ್ತಿದೆ. ಇದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ.
ಇದನ್ನೂ ಓದಿ:ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
ಇತ್ತೀಚೆಗೆ ಜಿಪಂ ಅಡಿ ಇಂಥ ಪ್ರಕರಣ ನಡೆದಿದೆ. ಗೊಂಡ ಪ್ರಮಾಣಪತ್ರ ಪಡೆದ ಹಿಂದುಳಿದ ವರ್ಗದವರಿಗೆ ಬಡ್ತಿ ನೀಡಲಾಗಿದೆ. ಆದರೆ, ಈ ಬಗ್ಗೆ ದೂರು ನೀಡಿದರೂ ಕಾರವಾರ ನಗರಸಭೆ ದೂರು ಸ್ವೀಕರಿಸುತ್ತಿಲ್ಲ.
ಅಲ್ಲದೆ, ಕ್ರಿಮ್ಸ್ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧವೂ ನಾವು ದೂರು ನೀಡಿದರೂ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸುತ್ತಿಲ್ಲ. ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ದೀಪಕ ಕುಡಾಳಕರ್, ಚಿದಾನಂದ ಹರಿಜನ, ತುಳಸಿದಾಸ ಪಾವಸ್ಕರ್, ಎನ್.ಆರ್.ಮುಕ್ರಿ, ರವಿ ಮುಕ್ರಿ, ಸಂತೋಷ ಚಂದಾವರ ಇತರರು ಪ್ರತಿಭಟನೆಯಲ್ಲಿದ್ದರು.