

ಮುಂಡಗೋಡ: ತಾಲೂಕಿನಲ್ಲಿರುವ 13 ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ದನಕರು ಹಾಗೂ ಸಾಕುಪ್ರಾಣಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ವಣವಾಗಿದೆ.
ಮೂಕ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಇಲ್ಲಿ ವೈದ್ಯರು ಇಲ್ಲದಂತಾಗಿದೆ. ತಾಲೂಕಿನಲ್ಲಿ 27 ಸಾವಿರ ದನಕರುಗಳಿವೆ. ಮೂಕ ಪ್ರಾಣಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದ ಪಶು ಸಂಗೋಪನಾ ಇಲಾಖೆಯೂ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ತಾಲೂಕು ಮಟ್ಟದ ಪಶು ಸಂಗೋಪನಾ ಆಸ್ಪತ್ರೆ, ಪಾಳಾ ಪಶು ಸಂಗೋಪನಾ ಕೇಂದ್ರ ಹಾಗೂ ವಿವಿಧ ಭಾಗಗಳಲ್ಲಿ ಆರು ಪಶು ಚಿಕಿತ್ಸಾಲಯಗಳು ಹಾಗೂ ಐದು ಪ್ರಾಥಮಿಕ ಪಶು ಚಿಕಿತ್ಸಾಲಯ ಸೇರಿ ಒಟ್ಟು 13 ಆಸ್ಪತ್ರೆಗಳು ತಾಲೂಕಿನಲ್ಲಿವೆ.
ಖಾಲಿ ಹುದ್ದೆ: 10 ಮುಖ್ಯ ಪಶು ವೈದ್ಯಾಧಿಕಾರಿಗಳು, 7 ಪಶು ಅಭಿವೃದಿಟಛಿ ಅಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, 8 ಪಶು ವೈದ್ಯಕೀಯ ಪರೀಕ್ಷಕರು, 9 ಕಿರಿಯ ಪಶು ವೈದ್ಯಕಿಯ ಪರೀಕ್ಷಕರು ಹಾಗೂ ಡಿ. ಗ್ರೂಪ್ನ 20 ಸಿಬ್ಬಂದಿ, ಹೀಗೆ 56 ಹುದ್ದೆಗಳು ಖಾಲಿಯಿವೆ. ಆದರೆ, ಇವುಗಳಲ್ಲಿ ತಲಾ ಒಬ್ಬ ಮುಖ್ಯ ಪಶು ವೈದ್ಯಾಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಮೂವರು ಪಶು ವೈದ್ಯಕೀಯ ಪರೀಕ್ಷಕರು, ಮೂವರು ಕಿರಿಯ ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಡಿ. ಗ್ರೂಪ್ನ ಒಬ್ಬರು, ಹೀಗೆ ಒಂಬತ್ತು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವೆಡೆ ಗ್ರೂಪ್ ಡಿ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿದರೆ ಉಳಿದೆಲ್ಲ ಹುದ್ದೆಗಳು ಖಾಲಿಯಿವೆ.
ತಾಲೂಕಿನ ಬಡ್ಡಿಗೇರಿ, ಬ್ಯಾನಳ್ಳಿ, ಮೈನಳ್ಳಿ, ಗೋದ್ನಾಳ, ಅತ್ತಿವೇರಿ, ಶಿರಗೇರಿ, ಜೋಡಿಕಟ್ಟ, ಹುಲಿಹೊಂಡ, ಮರಗಡಿ ಗೌಳಿದಡ್ಡಿ ಗ್ರಾಮಗಳಲ್ಲಿ ಹೈನೋದ್ಯಮ ನಡೆಯುತ್ತದೆ. ಈ ಗ್ರಾಮಗಳಲ್ಲಿ ದನಕರುಗಳು, ಎಮ್ಮೆ ಹಾಗೂ ಸಾಕುಪ್ರಾಣಿಗಳನ್ನು ಸಾಕಲಾಗುತ್ತದೆ. ದನಕರುಗಳಿಗೆ ಜ್ವರ, ಬಾಯಿಬೇನೆ, ಕಾಲುಬೇನೆ ಸೇರಿ ವಿವಿಧ ಕಾಯಿಲೆಗಳು ಬರುವುದು ಅನಿವಾರ್ಯ. ಕಳೆದ ವರ್ಷ ಗಂಟುರೋಗಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದ್ದರಿಂದ ದನಕರುಗಳು ಸಾವನ್ನಪ್ಪಿವೆ. ಇದಕ್ಕೆಲ್ಲ ಪಶು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯೇ ಕಾರಣ ಎಂದು ದೂರುತ್ತಾರೆ ಸಾರ್ವಜನಿಕರು.
ದನಕರುಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ವೈದ್ಯರಿಗೆ ಪೋನ್ ಮಾಡಿ ಕರೆಸಿಕೊಳ್ಳಬೇಕು. ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಅವರು ಬರುವುದಿಲ್ಲ. ಹೀಗಾಗಿ ಜಾನುವಾರುಗಳ ಚಿಕಿತ್ಸೆಗಾಗಿ ಸರ್ಕಾರ ವೈದ್ಯರನ್ನು ನೇಮಿಸಬೇಕು. | ರಾಜು ಕೊಕರೆ ಮೈನಳ್ಳಿ ಗ್ರಾಮಸ್ಥ ಮುಂಡಗೋಡ ತಾಲೂಕು ಪಶು ಆಸ್ಪತ್ರೆ
ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ತಾಲೂಕಿನಲ್ಲಿ ಖಾಲಿ ಇರುವ ಎಲ್ಲ ವೈದ್ಯರ ಹುದ್ದೆಗಳು ಭರ್ತಿಯಾದರೆ ಹೆಚ್ಚು ಅನುಕೂಲವಾಗುತ್ತದೆ. | ಬಸವರಾಜ ಮಲ್ನಾಡ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಮುಂಡಗೋಡ