ಆಹಾರ ವಿತರಣೆಗೂ ಸೈ ಎಂದ ಖಾಕಿ: ಎನ್​ಜಿಒ, ಸಂಘ-ಸಂಸ್ಥೆ ದಾನಿಗಳಿಂದ ಆಹಾರ ಪೊಟ್ಟಣ ನೆರವು|ಬಡವರ ಮನೆಗಳಿಗೆ ರವಾನೆ

police 30 mar 20
Published on

ಬೆಂಗಳೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಲವು ಪ್ರಯತ್ನಕ್ಕೆ ಮುಂದಾಗಿರುವ ಪೊಲೀಸರು, ಲಾಕ್​ಡೌನ್​ನಿಂದ ಊಟಕ್ಕೆ ಪರದಾಡುತ್ತಿರುವ ನಿರಾಶ್ರಿತರು ಹಾಗೂ ಕೂಲಿಕಾರ್ವಿುಕರಿಗೆ ಆಹಾರ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಡವರಿಗೆ ಊಟ ಹಾಗೂ ಆಹಾರ ವಿತರಿಸುವುದಾದರೆ ಸ್ಥಳೀಯ ಪೊಲೀಸರನ್ನು ಭೇಟಿ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ಇದರಿಂದಾಗಿ ವಿವಿಧ ಎನ್​ಜಿಒ, ಟ್ರಸ್ಟ್ ಹಾಗೂ ದಾನಿಗಳಿಂದ ಸ್ಯಾನಿಟೈಸರ್, ಮಾಸ್ಕ್, ದವಸ- ಧಾನ್ಯ, ಊಟ ಸೇರಿ ಅಗತ್ಯ ವಸ್ತುಗಳು ಹರಿದುಬರುತ್ತಿವೆ.

ಮಾಸ್ಕ್ ವಿತರಣೆ: ಉತ್ತರ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು ಮುಂತಾದ ಜಿಲ್ಲೆಗಳಿಂದ ಕೂಲಿ ಕೆಲಸಕ್ಕೆ ಬಂದಿದ್ದ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ವಾಹನವಿಲ್ಲದೆ ಬಹುತೇಕ ಮಂದಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಬಳ್ಳಾರಿ ರಸ್ತೆ, ತುಮಕೂರು ರಸ್ತೆಯಲ್ಲಿ ಅವರಿಗೆ ದಾರಿ ಮಧ್ಯೆ ಸ್ಯಾನಿಟೈಸರ್​ನಿಂದ ಕೈ ತೊಳೆಸಿ, ಮಾಸ್ಕ್ ವಿತರಿಸುತ್ತಿದ್ದಾರೆ.

ನಿರಾಶ್ರಿತರ ಕೇಂದ್ರದಲ್ಲಿ ಆರೈಕೆ: ದಕ್ಷಿಣ ವಿಭಾಗದ ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ, ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಚೇನಹಳ್ಳಿ, ಮೇಸ್ತ್ರಿಪಾಳ್ಯ, ವಿಧಾನಸೌಧ ಲೇಔಟ್​ನಲ್ಲಿರುವ ಬಡ ಕಾರ್ವಿುಕರ ಶೆಡ್​ಗಳು, ತಿರುಮೇನಹಳ್ಳಿ ರೋಹಿಂಗ್ಯ ನಿರಾಶ್ರಿತರ ಶೆಡ್​ಗಳಲ್ಲಿ ವಾಸವಿರುವ ನೂರಾರು ಜನರಿಗೆ ಪೊಲೀಸರು ಬೆಳಗಿನ ತಿಂಡಿ ಮತ್ತು ರಾತ್ರಿ ಊಟ ವಿತರಿಸಲು ಆರಂಭಿಸಿದ್ದಾರೆ. ಅಲ್ಲದೆ, ಆಯಾ ಠಾಣೆಗಳಲ್ಲಿ ‘ಕಮ್ಯೂನಿಟಿ ಕಿಚನ್ಸ್’ ಹಾಗೂ ‘ನಿರಾಶ್ರಿತರ ಕೇಂದ್ರ’ಗಳನ್ನು ತೆರೆಯಲಾಗಿದೆ. ಶನಿವಾರ ರಾತ್ರಿ 500 ಜನರಿಗೆ ಊಟ, ಭಾನುವಾರ ಬೆಳಗ್ಗೆ 650 ಜನರಿಗೆ ಉಪಾಹಾರ ವಿತರಿಸಲಾಗಿದೆ. ಇದೇ ಪ್ರಮಾಣದಲ್ಲಿ ರಾತ್ರಿಯ ಊಟ ವಿತರಿಸಲಾಗುತ್ತಿದೆ. ಇದಕ್ಕೆ ಆರ್.ಕೆ. ಹೆಗಡೆ ನಗರದ ರಾಜಸ್ಥಾನ ಸೇವಾ ಸಂಘ ಸೇರಿ ಇನ್ನು ಕೆಲ ಸಂಘ- ಸಂಸ್ಥೆಗಳು, ದಾನಿಗಳು ಕೈ ಜೋಡಿಸಿದ್ದಾರೆ. ಬಡವರ ನೆರವಿಗೆ ಧಾವಿಸಿದರೆ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ತಿಳಿಸಿದ್ದಾರೆ.

ಜಾಗೃತಿ ಪೋಸ್ಟ್

ಮಹಾನಗರದ ಸಂಚಾರ ಪೊಲೀಸರು ಫೇಸ್​ಬುಕ್, ಟ್ವಿಟರ್ ಹಾಗೂ ಇನ್​ಸ್ಟಾಗ್ರಾಮ್ ಸೇರಿ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ‘ಈ ಸಲ ಕಪ್ ನಮ್ದೆ, ಜನರೆಲ್ಲ ಮನೆಯಲ್ಲಿದ್ದು ಸಹಕರಿಸಿದರೆ’, ‘ಕಳಬೇಡ ಕೊಲಬೇಡ’ ವಚನ ನೆನಪಿಸುವಂತೆ ‘ಕೆಮ್ಮಬೇಡ ಸೀನಬೇಡ, ಗುಂಪುಗೂಡ ಬೇಡ, ಮಾಸ್ಕ್ ಧರಿಸದೆ ಇರಬೇಡ, ಕಣ್ಣು-ಮೂಗು ಮುಟ್ಟುತಲಿರಬೇಡ, ಕೈ ತೊಳೆಯುವುದು ಬಿಡಬೇಡ, ಇದೇ ಕರೊನಾ ಓಡಿಸುವ ಪರಿ’ ಎಂಬ ಬರಹವಿದ್ದ ಪೋಸ್ಟ್ ಗಳನ್ನು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜಾಗೃತಿಯಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net