ಸರ್ಕಾರದ ಸವಲತ್ತು ಪಡೆಯಲು ಸವಿತಾ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು

Savitha_Samaja
Published on

ತುಮಕೂರು: ಸವಿತಾ ಸಮಾಜದ ಯುವಜನತೆ ಶೈಕ್ಷಣಿಕವಾಗಿ, ಅರ್ಥಿಕವಾಗಿ ಮುಂದೆ ಬರಲು ಅಗತ್ಯವಾದ ಮಾರ್ಗದರ್ಶನ ನೀಡುವ ಜವಾಬ್ಧಾರಿ ಸಮಾಜದ ಹಿರಿಯರು ತೆಗೆದುಕೊಳ್ಳಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಸಲಹೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಕಸಾಪ, ಸವಿತಾ ಸಮಾಜ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ದೀಪಬೆಳಗಿ , ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,ದುಡಿಯುವ ಕೈಗಳಿಗೆ ಕೆಲಸ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಶೈಕ್ಷಣಿಕವಾಗಿ, ಅರ್ಥಿಕವಾಗಿ ಹೇಗೆ ಸವಿತಾ ಸಮಾಜದ ಸದೃಢವಾಗಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಿ, ಅವರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ತಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಯಾವುದೇ ಸಮಾಜ ಅಭಿವೃದ್ದಿಯಾಗಬೇಕೆಂದರೆ ಒಗ್ಗಟ್ಟು ಅತಿ ಮುಖ್ಯ. ನಿಮ್ಮಲ್ಲಿ ಸಂಘಟನೆ ಎಂಬುದು ಇದ್ದರೆ, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.ಸವಿತಾ ಸಮಾಜದಲ್ಲಿ ಒಗ್ಗಟ್ಟಿದೆ.ಆದರೆ ಸರ್ಕಾರದ ಸವಲತು ಪಡೆಯುವ ನಿಟ್ಟಿನಲ್ಲಿಯೂ ನೀವುಗಳು ಒಗ್ಗಟ್ಟು ಪ್ರದರ್ಶಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳಿಂದ ಹೇಗೆ ನಮ್ಮ ಯುವಕರು ಸವಲತ್ತುಗಳನ್ನು ಪಡೆಯಬಹುದು ಎಂದರು.

ಜಿಪಂ ಉಪ ಕಾರ್ಯದರ್ಶಿ ಹಾಲುಸಿದ್ದಪ್ಪ ದೊಡ್ಡೇರಿ ಮಾತನಾಡಿ, ಸವಿತಾ ಸಮಾಜ ಸೇವಾ ಮನೋಭಾವನೆ ಹೊಂದಿರುವ ಸಮಾಜ. ಶೈಕ್ಷಣಿಕವಾಗಿ, ಅರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ತೀರ ಹಿಂದೆ ಉಳಿದಿದೆ. ಒಗ್ಗಟ್ಟಿನಲ್ಲಿ ಇದ್ದರೆ ಮಾತ್ರ ರಾಜಕೀಯವಾಗಿ, ಅರ್ಥಿಕವಾಗಿ ಬೆಳೆಯಲು ಸಾಧ್ಯ. ರಾಜ್ಯ ಸರ್ಕಾರದ ಸವಿತಾ ಸಮಾಜ ಅಭಿವೃದ್ದಿ ನಿಗಮ ಹಾಗೂ ಕೇಂದ್ರದ ವಿಶ್ವಕರ್ಮ ಯೋಜನೆಗಳ ಅಡಿಯಲ್ಲಿ ದೊರೆಯುವ ಸವಲತುಗಳನ್ನು ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮಾತನಾಡಿ, 12ನೇ ಶತಮಾನದ ಶರಣರು ದುಡಿಮೆಯೇ ದೇವರೆಂದು ನಂಬಿದ್ದವರು. ಅಂದು ದುಡಿಮೆಗಾಗಿ ಕೈಗೊಂಡ ವೃತ್ತಿಗಳೇ ಇಂದು ಜಾತಿಗಳಾಗಿ ಪರಿವರ್ತನೆಯಾಗಿವೆ. ಶರಣರ ಪ್ರಕಾರ ಯಾವ ವೃತ್ತಿಯೂ ಕೀಳಲ್ಲ, ಮೇಲಲ್ಲ. ಎಲ್ಲ ವೃತ್ತಿಗೂ ಅದರದ್ದೇ ಆದ ಮಾನ್ಯತೆ ಇದೆ.ಆದರೆ, ಇತ್ತೀಚಿನ ದಿನಗಳಲ್ಲಿ ಸೇವಾ ವೃತ್ತಿಗಳೇ ಸಂಕುಚಿತಗೊಂಡು, ಒಬ್ಬರ ಹಬ್ಬಗಳಲ್ಲಿ ಮತ್ತೊಬ್ಬರು ಭಾಗವಹಿಸದಂತಹ ವೈರುದ್ಯತೆ ಬೆಳೆದಿದೆ ಎಂದರು.

ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕಟ್​ವೆಲ್​ ರಂಗನಾಥ ಮಾತನಾಡಿ, ಇದುವರೆಗೂ ಕ್ಷೌರಿಕ ವೃತ್ತಿ ಮಾಡುವವರು ಮಾತ್ರ ಸವಿತಾ ಸಮಾಜ ಎಂದುಕೊಂಡಿದ್ದೆವು. ನಮ್ಮಲ್ಲಿಯೂ ವಿದ್ಯಾವಂತರಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಜನರಿದ್ದಾರೆ ಎಂಬುದನ್ನು ಡಿಎಸ್​ ಹಾಲಸಿದ್ದಪ್ಪ ದೊಡ್ಡೇರಿ, ಎಡಿಎ ಅಶ್ವತನಾರಾಯಣ, ಮೀನುಗಾರಿಕೆ ಇಲಾಖೆ ಸೂಪರಿಂಡೆಂಟ್​ ಚೈತನ್ಯಕುಮಾರಿ ಅವರುಗಳನ್ನು ನೋಡಿದಾಗ ಸಂತೋಷವಾಯಿತು. ಇಂತಹವರ ಸಂಖ್ಯೆ ಹೆಚ್ಚಾಗಬೇಕೆಂದರೆ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುವಂತೆ ಮಾಡಬೇಕು. ಅವರಲ್ಲಿಯೂ ಉನ್ನತ ಅಧಿಕಾರಿಯಾಗುವ ಕನಸು ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘ ಕೆಲಸ ಮಾಡಲಿದೆ ಎಂದರು.

ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಮಂಜೇಶ್​ ಮಾತನಾಡಿ, ಜಿಲ್ಲೆಯಲ್ಲಿ ಸವಿತಾ ಸಮಾಜದ ಯುವಜನರಿಗೆ ಕುಲಕಸುಬಿನ ಜತೆಯಲ್ಲಿಯೇ ಅಧುನಿಕ ತಂತ್ರಜ್ಞಾನ ಬೆಳೆಸಿಕೊಂಡು ಹೊಸ ಹೊಸ ವಿನ್ಯಾಸದ ಬ್ಯೂಟಿಷಿಯನ್​ಗಳಾಗಿ ಹೇಗೆ ಬೆಳೆಯಬಹುದು ಎಂಬ ಬಗ್ಗೆ ಹಲವಾರು ತರಬೇತಿ ನೀಡಲು ಮುಂದಾಗಿದ್ದೇವೆ ಎಂದರು.

ಸ್ವದೇಶಿ ವಿಶ್ವಣ್ಣ ಅವರು ಸವಿತಾ ಮಹರ್ಷಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಆಶ್ವಥನಾರಾಯಣ, ಹಿರಿಯ ಕ್ಷೌರಿಕ ಸುಬ್ರಮಣ್ಯ, ಯುವ ಕ್ಷೌರಿಕ ಶಿವಣ್ಣ, ಡೋಲು ವಿದ್ವಾನ್​ ಎಚ್​.ಜಿ.ಶಿವಶಂಕರ್​, ಬ್ಯೂಟಿಷಿಯನ್​ ಎನ್​.ಮಂಜುಳಾ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು.ಮಿರ್ಜಿ, ಸುರೇಶಕುಮಾರ್​, ಜಿಲ್ಲಾ ಸವಿತಾ ಸಮಾಜದ ಕೆ.ವಿ.ನಾರಾಯಣ್​, ಪದಾಧಿಕಾರಿಗಳಾದ ಸುರೇಶ್​, ಬಿ.ಗಂಗಾಧರ್​, ಪಾರ್ಥಸಾರಥಿ, ಟಿ.ಆರ್​.ಮೇಲಾಕ್ಷಪ್ಪ, ಚೈತನ್ಯಕುಮಾರಿ, ದಾಸರಾಜು, ಸತ್ಯನಾರಾಯಣ, ಲಲಿತಮ್ಮ, ಟಿ.ವಿ.ಸೀತಾರಾಮಯ್ಯ, ಕೆ.ಸಿ.ವರದರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net