

ತುಮಕೂರು: ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಕ್ಷೌರಿಕ ಸಮಾಜವನ್ನು ಅಪಮಾನಿಸುವ ನಿಷೇಧಿತ ಪದ ಬಳಸಿರುವುದನ್ನು ಖಂಡಿಸಿರುವ ಜಿಲ್ಲಾ ಸವಿತಾ ಸಮಾಜದ ಮುಖಂಡರು ಎಂಎಲ್ಸಿ ಸ್ಥಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸವಿತಾ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ರವಿ ಅವರ ವಿಧಾನಪರಿಷತ್ ಸ್ಥಾನವನ್ನು ರದ್ದು ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಚ್.ವಿ.ಮಂಜೇಶ್ ಗಾಂಧಿ, ಕೆಲ ತಿಂಗಳ ಹಿಂದೆ ಯಲ್ಲಾಪುರದಲ್ಲಿ ಮೋಸ, ವಂಚನೆ, ದರೋಡೆ, ಕಳ್ಳತನವನ್ನು ತಲೆ ಬೋಳಿಸುವುದಕ್ಕೆ ಹೋಲಿಕೆ ಮಾಡಿ ನಿಂದಿಸಿದ ಸಿ.ಟಿ.ರವಿ ಅವರು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸವಿತಾ ಸಮಾಜವನ್ನು ನಿಂದಿಸುವ ನಿಷೇಧಿತ ಪದ ಬಳಸಿದ್ದರು. ಇದು ಉದ್ದೇಶಪೂರ್ವಕವಾಗಿ ನಮ್ಮ ಸಮಾಜವನ್ನು ನಿಂದಿಸುವುದೇ ಆಗಿದೆ ಎಂದು ಆರೋಪಿಸಿದರು.
ದೇಶ ಭಕ್ತನಂತೆ ಪೋಸ್ ಕೊಡುವ ಸಿ.ಟಿ.ರವಿಗೆ ಎಲ್ಲಾ ಸಮಾಜಗಳನ್ನು ಗೌರವದಿಂದ ಕಾಣಬೇಕೆಂಬ ವಿವೇಚನೆ ಇಲ್ಲ. ಭಾರತದ ಅವಿಭಾಜ್ಯ ಅಂಗವಾಗಿರುವ, ಎಲ್ಲಾ ಸಮಾಜದವರ ಹೊಂದಿಕೊಂಡು ಹೋಗುವ ಕ್ಷೌರಿಕ ಸಮಾಜದವರ ಬಗ್ಗೆ ಅತ್ಯಂತ ಕೀಳು ಭಾವನೆ ಹೊಂದಿರುವ ಇವರನ್ನು ವಿಧಾನಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿದರು.
ಸವಿತಾ ಸಮಾಜದ ವೃತ್ತಿ ಹಾಗೂ ಜಾತಿಯ ಭಾವನೆಗಳನ್ನು ಕೆರಳಿಸಿ ನಿಷೇಧಿತ ಪದ ಬಳಸಿ ಅಪಮಾನ ಮಾಡಿದ ಸಿ.ಟಿ.ರವಿ ವಿರುದ್ಧ ಜಾತಿನಿಂದನೆ ಆರೋಪದಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಇಂತಹ ವ್ಯಕ್ತಿಗಳನ್ನು ಸವಿತಾ ಸಮಾಜ ಧಿಕ್ಕರಿಸುತ್ತದೆ. ಯಾರ ಹಂಗಿಲ್ಲದೆ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಾಭಿಮಾನಿ ಸವಿತಾ ಸಮಾಜದವರನ್ನು ಅಪಮಾನ ಮಾಡಿರುವ ರವಿ ನಮ್ಮ ಸಮಾಜದ ಕ್ಷಮೆ ಕೇಳಬೇಕು ಎಂದು ಮಂಜೇಶ್ ಗಾಂಧಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಕೆ.ಎಸ್.ರಘುನಾಥ್, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣಸ್ವಾಮಿ, ಮುಖಂಡರಾದ ಪಾರ್ಥಸಾರಥಿ, ಶಾಂತರಾಜು, ಮೇಲಾಕ್ಷಪ್ಪ, ನಾಗೇಂದ್ರ, ಹರೀಶ್, ಒ.ಕೆ.ರಾಜು, ಎ.ಎಸ್.ಸುರೇಶ್, ಬಸವರಾಜು, ನಾಗಭೂಷಣ್, ಎ.ಆರ್.ಉಮೇಶ್, ರವಿಚಂದ್ರ, ಕೃಷ್ಣಮೂರ್ತಿ, ಮಂಗಳವಾಡ ನಾಗರಾಜು ಮತ್ತಿತರರು ಭಾಗವಹಿಸಿದ್ದರು.